Saturday, March 14, 2009

ಸಂಶೋಧನೆಗೆ ಮತ್ತೆ ಮಹತ್ವ ಬಂದಿದೆ, ಜೊತೆಗೆ ಸಂಶೋಧನೆ ಎಂದರೇನೆಂದು ಕೇಳಿಕೊಳ್ಳುವ ಕಾಲವೂ ಬಂದಿದೆ

ಸಂಶೋಧನೆ ಎಂದರೇನು ಎಂದು ಕೇಳಿಕೊಳ್ಳುವ ದಿನ ಇವತ್ತು ಬಂದಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಡಾಕ್ಟೊರೇಟ್ ಪದವಿ ಪಡೆದವರನ್ನು ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ನಾವು ಕಾಣಬಹುದು. ಇವರನ್ನು ನಿಮಗೆ ಏಕೆ ಡಾಕ್ಟೊರೇಟ್ ನೀಡಿದ್ದಾರೆ? ಅದರ ಪ್ರಯೋಜನ ಏನು? ಏಕೆ ಡಾಕ್ಟೊರೇಟ್ ಆಫ್ ಫಿಲಾಸಫಿ ಎನ್ನುತ್ತಾರೆ? ಎಂದೆಲ್ಲಾ ಕೇಳಿದರೆ ಬಹಳ ಜನಕ್ಕೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಅಬ್ಬಬ್ಬ ಎಂದರೆ ಅವರ ಉತ್ತರ ಈ ರೀತಿ ಇರುತ್ತದೆ: ಶಿಸತ್ಯವನ್ನು ಹುಡುಕುವುದುಷಿ, ಶಿಹೊಸದನ್ನು ಕಂಡುಹಿಡಿಯುವುದುಷಿ, ಶಿಒಂದು ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿರುವುದರಿಂದ, ಡಾಕ್ಟರ್ ಎನ್ನುತ್ತಾರೆಷಿ, ಇತ್ಯಾದಿ. ಈ ಸಮಸ್ಯೆಯ ಮೂಲವು ಸಂಶೋಧನೆ, ತತ್ವಶಾಸ್ತ್ತ್ರ, ವಿಶ್ವವಿದ್ಯಾಲಯದ ಚರಿತ್ರೆ, ಅಧ್ಯಯನ ಶಿಸ್ತುಗಳ ಹುಟ್ಟು ಬೆಳವಣಿಗೆಗಳ ಚಾರಿತ್ರಾತ್ಮಕ ಪರಿಚಯದ ಕೊರತೆಯಲ್ಲಿದೆ.

ತತ್ವಶಾಸ್ತ್ತ್ರ
ಮನುಷ್ಯಪ್ರಾಣಿಯು ನಾನು ಯಾರು? ನಾನು ಏಕೆ ಇಲ್ಲಿದ್ದೇನೆ? ಹೇಗೆ ಬಂದೆ? ನನ್ನ ಸುತ್ತಲೂ ಏನಿದೆ? ನನಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನೆಗಳನ್ನು ಕೇಳುವುದರಿಂದ ತತ್ವಶಾಸ್ತ್ತ್ರ ಆರಂಭವಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲಿಗೆ ಥಿಯಾಲಜಿಯಲ್ಲಿ (ಧಾರ್ಮಿಕ ಆವರಣ) ಕಂಡುಕೊಳ್ಳಲಾಗಿತ್ತು. ಈಗಲೂ ಈ ಪ್ರಶ್ನೆಗಳಿಗೆ ಧರ್ಮಗಳು, ಪಂಥಗಳು ತಮ್ಮ ಅನುಯಾಯಿಗಳಿಗೆ ಉತ್ತರವನ್ನು ಒದಗಿಸುತ್ತವೆ. ಆದರೆ ಈ ಪ್ರಶ್ನೆಗಳು ಮತ್ತಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಡುತ್ತಿದ್ದಂತೆ ತತ್ವಶಾಸ್ತ್ತ್ರದಲ್ಲಿಯೇ ಇತರೆ ಅಧ್ಯಯನ ಶಾಖೆಗಳು ಆರಂಭಗೊಂಡವು. ಮನುಷ್ಯನ ದೇಹವನ್ನು, ಅದರ ಸುತ್ತಮುತ್ತಲಿನ ವಸ್ತುಗಳನ್ನು ಅಧ್ಯಯನ ಮಾಡುವುದು ಒಂದು ಶಾಖೆ, ಆ ವಸ್ತುಗಳನ್ನು ಭೌತಿಕವಾಗಿ ಅಧ್ಯಯನ ಮಾಡುವುದು ಬೇರೆ, ರಾಸಾಯನಿಕವಾಗಿ ಅಧ್ಯಯನ ಮಾಡುವುದು ಬೇರೆ, ಸಾಮಾಜಿಕವಾಗಿ ಅಧ್ಯಯನ ಮಾಡುವುದು ಬೇರೆ, ಮನಸ್ಸನ್ನು ಅಧ್ಯಯನ ಮಾಡುವುದು ಬೇರೆ, ರಾಜಕೀಯವಾಗಿ ಅಧ್ಯಯನ ಮಾಡುವುದು ಬೇರೆ ಇತ್ಯಾದಿ, ಇತ್ಯಾದಿ. ಅಂದರೆ ನಾವು ಅಧ್ಯಯನ ಮಾಡುತ್ತಿರುವ ವಸ್ತುಗಳು ಒಂದೇ ಆದರೂ ಅವುಗಳ ಯಾವ ಅಂಶವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ ಎಂಬುದರ ಮೇಲೆ ನಾವು ಯಾವ ಅಧ್ಯಯನ ಶಿಸ್ತಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇವೆ ಎಂಬುದು ನಿರ್ಧಾರವಾಗುತ್ತದೆ. ಉದಾಹರಣೆಗೆ ಒಂದು ಮರವನ್ನು ಅದರ ಭೌತಿಕ ಗುಣಗಳಿಗಾಗಿ ಅಧ್ಯಯನ ಮಾಡುವುದು ಭೌತಶಾಸ್ತ್ತ್ರದ ಭಾಗವಾದರೆ, ಅದರ ರಾಸಾಯನಿಕ ಗುಣಗಳಿಗಾಗಿ (ರಸಾಯನ ಶಾಸ್ತ್ತ್ರ), ಅದರ ಜೈವಿಕ ಗುಣಗಳಿಗಾಗಿ (ಜೀವಶಾಸ್ತ್ತ್ರ :/ ಸಸ್ಯಶಾಸ್ತ್ತ್ರ), ಒಂದು ಸಮಾಜದಲ್ಲಿ ಅದು ಪಡೆದಿರುವ ಮೌಲ್ಯಾತ್ಮಕ ಗುಣಗಳಿಗಾಗಿ (ಮಾನವಶಾಸ್ತ್ತ್ರ/ಜಾನಪದ/ಸಂಸ್ಕ್ಕತಿ ಅಧ್ಯಯನ) ಅಧ್ಯಯನ ಮಾಡುವುದು ಬೇರೆ ಬೇರೆ ಅಧ್ಯಯನ ಶಿಸ್ತುಗಳ ಭಾಗವಾಗುತ್ತದೆ. ಆದರೆ ಈ ಎಲ್ಲಾ ಅಧ್ಯಯನಗಳೂ ಮೂಲಭೂತ ಪ್ರಶ್ನೆಗಳಾದ ನಾನು ಯಾರು? ನನ್ನ ಸುತ್ತಮುತ್ತಲೂ ಏನಿದೆ? ಅದಕ್ಕೂ ನನಗೂ ಏನು ಸಂಬಂಧ? ಇವುಗಳಿಗೆ ಉತ್ತರ ಹುಡುಕುವ ಪ್ರಯತ್ನಗಳೇ ಆಗಿವೆ. ಆದ್ದರಿಂದ ನಾವು ಯಾವುದೇ ಅಧ್ಯಯನ ಶಿಸ್ತಿನ ಒಳಗೆ ಅಧ್ಯಯನ ಮಾಡಿದರೂ ಅದು ತತ್ವಶಾಸ್ತ್ತ್ರದ ಭಾಗವೇ ಆಗುತ್ತದೆ. ಡಾಕ್ಟ್ತ್ರಿನ್ (ಸಿದ್ದಾಂತ) ರೂಪಿಸುವವರು ಡಾಕ್ಟರ್ಗಳಾಗುತ್ತಾರೆ.

ವಿಶ್ವವಿದ್ಯಾಲಯಗಳು-ಧರ್ಮ(ರಿಲಿಜನ್)
ತತ್ವಶಾಸ್ತ್ತ್ರವು ಮೊದಲಿಗೆ ಧರ್ಮದೊಂದಿಗೆ ತಳುಕುಹಾಕಿಕೊಂಡಿದ್ದನ್ನು ನಾನು ಮೇಲೆ ಹೇಳಿದೆ. ಪ್ರಪಂಚದಲ್ಲಿ ಇಂದು ವಿಶ್ವವಿದ್ಯಾಲಯಗಳೆಂದು ಗುರುತಿಸುವ ವಿದ್ಯೆಯನ್ನು ರೂಪಿಸುವ ಮತ್ತು ಪ್ರಸರಿಸುವ ಪ್ರಯತ್ನಗಳೂ ಧರ್ಮದ ಭಾಗವಾಗಿಯೇ ಆರಂಭಗೊಂಡವು. ರಾಜಪ್ರಭುತ್ವಗಳೂ ವಿದ್ಯೆಯ/ಜ್ಞಾನದ ಮಹತ್ವವನ್ನು ಅರಿತು ಅವುಗಳನ್ನು ತಮ್ಮ ಆಡಳಿತದ ಕಕ್ಷೆಯ ಭಾಗವಾಗಿ ತರಲು ಯತ್ನಿಸಲಿಲ್ಲ. ಇದರಿಂದಾಗಿ ಅವುಗಳು ಸ್ವಾಯತ್ತ ಕಾಯಗಳಾಗಿದ್ದವು (ಆದರೆ ಧರ್ಮಗಳು ರಾಜಪ್ರಭುತ್ವಗಳನ್ನು ಬಳಸಿಕೊಂಡಿದ್ದು ಬೇರೆಯದೇ ಆದ ವಿಷಯ). ಧರ್ಮಗಳು ತಮ್ಮ ಅಳಿವಿಗಾಗಿ ಬೇರೆ ಧರ್ಮಗಳ, ಪಂಥಗಳ ವಿಚಾರಗಳನ್ನೂ ಅಧ್ಯಯನ ಮಾಡುತ್ತಿದ್ದವು. ತಮ್ಮದು ಉತ್ತಮವಾದದ್ದು ಎಂದು ನಿರೂಪಿಸಬೇಕಾದರೆ ಇತರರು ಏನು ಹೇಳುತ್ತಿದ್ದಾರೆ, ಏಕೆ ಹೇಳುತ್ತಿದ್ದಾರೆ, ಅದಕ್ಕೆ ಆಧಾರ/ಪ್ರಮಾಣ ಏನು ಎಂದು ಹೇಳುವುದೂ ಅಗತ್ಯವಾಗಿತ್ತು. ಇದರಿಂದ ಒಂದು ರೀತಿಯ ಅರೆ-ಧರ್ಮಾತೀತತೆ ಅವುಗಳಿಗೆ ದೊರಕಿತು.

ಬಂಡವಾಳದ ಉಗಮ, ರಾಷ್ಟ್ತ್ರೀಯತೆಯ ಗಾಳಿ, ವಸಾಹತೀಕರಣದ ಸಂದರ್ಭದಲ್ಲಿ ಇತರೆ ಜನರಿಂದ ಎದುರಾದ ಸವಾಲುಗಳು ಈ ಪ್ರಯತ್ನಗಳಿಗೆ ಮತ್ತಷ್ಟು ಧರ್ಮಾತೀತತೆಯ ಬಣ್ಣವನ್ನು ನೀಡಿದವು. ಧರ್ಮದ ಅಗತ್ಯಗಳೊಂದಿಗೆ ರಾಷ್ಟ್ತ್ರಗಳ ಅಗತ್ಯಗಳೂ, ಆರ್ಥಿಕಉದ್ಯಮಶೀಲತೆಯ ಅಗತ್ಯಗಳೂ ತಳುಕಿಹಾಕಿಕೊಂಡವು. ಆದರೆ ಇವತ್ತಿನ ವಿಶ್ವವಿದ್ಯಾಲಯಗಳು ಮೊದಲಿಗೆ ಕ್ರಿಶ್ಚಿಯನ್ಧರ್ಮದ ಭಾಗವೇ ಆಗಿದ್ದು ನಂತರ ಧರ್ಮಾತೀತವಾಗಿರುವುದು. ಆದ್ದರಿಂದ ಧರ್ಮಾತೀತ ಅಂದರೆ ಕೆಲವೊಮ್ಮೆ ಹಳೆಯ ಕ್ರಿಶ್ಚಿಯನ್ ಧರ್ಮದಿಂದ ಉದಾರವಾದ ನಿಲುವುಗಳನ್ನು ತಳೆಯುವುದು ಎಂಬ ಅರ್ಥ ಇದೆ.

ಅಧ್ಯಯನ ಶಿಸ್ತುಗಳು
ಕೇವಲ ಧರ್ಮಶಾಸ್ತ್ತ್ರ, ವ್ಯಾಕರಣ, ತರ್ಕ, ವೈದ್ಯಶಾಸ್ತ್ತ್ರ ಇವುಗಳೊಂದಿಗೆ ತಳುಕಿಹಾಕಿಕೊಂಡಿದ್ದ ವಿಶ್ವವಿದ್ಯಾಲಯಗಳಲ್ಲಿ ಇತರ ಅಧ್ಯಯನಶಾಸ್ತ್ತ್ರಗಳ ಹುಟ್ಟು ಮತ್ತು ಬೆಳವಣಿಗೆಯ ಪ್ರಕ್ರಿಯೆ ಆರಂಭವಾಯಿತು. ಆದರೆ ಈ ಕಥೆ ಅಷ್ಟು ಸುಲಭವಾದ ಕಥೆಯಲ್ಲ.

ಇವತ್ತು ಸಂಶೋಧನೆ ಎಂದರೆ ಹೊಸದನ್ನು ಕಂಡುಹಿಡಿಯುವುದು ಎಂದು ನಾವು ಯಾವುದನ್ನು ಹೇಳುತ್ತೇವೆ ಅದು ವಿಜ್ಞಾನಗಳಲ್ಲಿ ನಡೆಯುವ ಇನ್ವೆನ್ಷನ್ನಿಂದ ಬಂದಿರುವುದು. ಆದರೆ ಈ ವಿಜ್ಞಾನಗಳು ಮೊದಲಿಗೆ ಖಾಸಗಿ ಪ್ರಯತ್ನಗಳಾಗಿದ್ದವು, ವಿಶ್ವವಿದ್ಯಾಲಯಗಳಲ್ಲಿ ಇವುಗಳಿಗೆ ಜಾಗವಿರಲಿಲ್ಲ. ಹಳೆಯ ಇನ್ವೆನ್ಷನ್ಗಳಲ್ಲಿ ಬಹಳಷ್ಟು ವಿಜ್ಞಾನಿಗಳು ತಮ್ಮ ಆಸಕ್ತಿಯ ಫಲವಾಗಿ ಮಾಡಿದ ಸಾಧನೆಗಳೇ ಆಗಿವೆ. ವಿಜ್ಞಾನವು ನಂತರವಷ್ಟೇ ಬಹಳ ಪ್ರಯಾಸದಾಯಕವಾಗಿ ವಿಶ್ವವಿದ್ಯಾಲಯಗಳಲ್ಲಿ ಜಾಗ ಪಡೆಯಿತು. ಅದೇ ರೀತಿ ರಾಷ್ಟ್ತ್ರಗಳ, ಬಂಡವಾಳಶಾಹಿ/ ವಸಾಹತು ಉದ್ಯಮಶೀಲತೆಯ ಆರಂಭದೊಂದಿಗೆ ಅರ್ಥಶಾಸ್ತ್ತ್ರ, ತಮ್ಮ ಸಮಾಜವನ್ನು ಅಧ್ಯಯನ ಮಾಡುವುದಕ್ಕೆ ಸಮಾಜಶಾಸ್ತ್ತ್ರ, ತಮ್ಮದಲ್ಲದ ವಸಾಹತುಸಮಾಜಗಳನ್ನು ಅಧ್ಯಯನ ಮಾಡುವುದಕ್ಕೆ ಮಾನವಶಾಸ್ತ್ತ್ರ ಇತ್ಯಾದಿಗಳು ರೂಪುಗೊಂಡವು. ಈ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಅದೇ ರೀತಿ ಬಹಳಷ್ಟು ಸಿದ್ದಾಂತಗಳು (ಉದಾ. ಮಾರ್ಕ್ಸ್ವಾದ) ವಿಶ್ವವಿದ್ಯಾಲಯದ ಆಚೆ ರೂಪುಗೊಂಡು ನಂತರ ವಿಶ್ವವಿದ್ಯಾಲಯದೊಳಗೆ ಪ್ರವೇಶ ಪಡೆದಿವೆ.

ಆದರೆ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗಿ, ಅವುಗಳನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಒಡೆದುಕೊಂಡು ಮತ್ತೆ ಅವುಗಳಿಗೆ ಉತ್ತರ ಹುಡುಕಲು ಹೋಗಿ, ನೂರಾರು ಅಧ್ಯಯನ ಶಿಸ್ತುಗಳನ್ನು ಆರಂಭಿಸಿ ಇಂದು ಯಾವುದೇ ಅರ್ಥಪೂರ್ಣವಾದ ಉತ್ತರಗಳನ್ನು ನೀಡುವಲ್ಲಿ ವಿಫಲವಾಗಿದ್ದೇವೆ ಎಂದು ವಿಶ್ವವಿದ್ಯಾಲಯಗಳು ಭಾವಿಸಲಾರಂಭಿಸಿವೆ. ನಾವು ಆಳವಾದ ಅಧ್ಯಯನಕ್ಕಾಗಿ ಎಳೆದುಕೊಂಡ ಗೆರೆಗಳು ತಮಗೆ ಇಂದು ಮುಳುವಾಗಿರುವುದನ್ನು ಗುರುತಿಸಲಾರಂಭಿಸಿವೆ. ಇದಕ್ಕಾಗಿ ಇಂದು ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಅಧ್ಯಯನಗಳ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಇವುಗಳ ನಡುವಿನ ವ್ಯತ್ಯಾಸಗಳೇನು? ಶಿಸ್ತಿನ ಲಕ್ಷಣಗಳೇನು? ವ್ಯಾಖ್ಯಾನವೇನು? ಎನ್ನುವ ಪ್ರಶ್ನೆಗಳು ಚರ್ಚೆಗೆ ಒಳಪಟ್ಟಿವೆ. ಇವುಗಳನ್ನು ಇಲ್ಲಿ ವಿವರಿಸಲು ಹೋಗುವುದಿಲ್ಲ.

ಸತ್ಯದ ಸಮಸ್ಯೆ-ಜ್ಞಾನದ/ಅರಿವಿನ/ತಿಳುವಳಿಕೆಯ ಉತ್ಪಾದನೆಯ ನೆಲೆ
ಆದರೆ ಇಂದು ಬಹಳಷ್ಟು ಸಿದ್ದಾಂತಗಳು ಸತ್ಯವೆನ್ನುವ ಪರಿಕಲ್ಪನೆಯನ್ನು ಬಹಳ ಆಳವಾದ ಪರೀಶೀಲನೆಗೆ ಒಡ್ಡಿವೆ. ಸತ್ಯವನ್ನು ಆತ್ಯಂತಿಕವಾಗಿ ಭಾವಿಸುವುದು ಎಷ್ಟು ಸಮಸ್ಯಾತ್ಮಕವಾದದ್ದು ಎನ್ನುವುದನ್ನು ಅವು ನಮ್ಮ ಮುಂದೆ ಇಟ್ಟಿವೆ. ಆದ್ದರಿಂದ ನಾವು ಸಂಶೋಧನೆಯನ್ನು ವ್ಯಾಖ್ಯಾನಿಸುವಾಗ ಈ ಪರಿಕಲ್ಪನೆಯನ್ನು ಬಳಸುವುದು ಸಾಧ್ಯವಾಗಲಾರದು. ಹಾಗಾದರೆ ಸಂಶೋಧನೆಯನ್ನು ವ್ಯಾಖ್ಯಾನಿಸುವುದು ಹೇಗೆ ಎಂಬ ಪ್ರಶ್ನೆ ಮತ್ತೆ ಉಳಿಯುತ್ತದೆ. ಇತ್ತೀಚೆಗೆ ಜ್ಞಾನ/ಅರಿವು/ತಿಳುವಳಿಕೆಯನ್ನು ನೀಡುವುದು ಸಂಶೋಧನೆ ಎನ್ನಲಾಗುತ್ತಿದೆ. ಸಂಶೋಧನೆಯ ಮೂಲಕ ನಾವು ಜ್ಞಾನವನ್ನು ಯಾವುದೇ ವಿಷಯದ ಬಗ್ಗೆ ಉತ್ಪಾದಿಸುತ್ತೇವೆ. ಇದಕ್ಕೆ ಪ್ರತಿಯಾಗಿ ಕೆಲವರು ಕೆಲವು ಪ್ರಶ್ನೆಗಳನ್ನು ಕೇಳಬಹುದು: ಸಂಶೋಧನೆ ಮಾಡಿದವರಿಗೆ ಮಾತ್ರ ಜ್ಞಾನ ಇರುತ್ತದೆ, ಇತರರಿಗೆ ಇರುವುದಿಲ್ಲ ಎಂದೇ? ಅಥವಾ ಸಂಶೋಧನೆಯೇತರ ಜ್ಞಾನ/ತಿಳುವಳಿಕೆ/ಅರಿವು ಇರುವುದಿಲ್ಲ ಎಂದೇ? ಈ ಪ್ರಶ್ನೆಗಳಿಗೆ ಉತ್ತರ ನಕಾರಾತ್ಮಕವಾದ್ದು.

ಅಂದರೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಶಿಸ್ತಿನ ಚೌಕಟ್ಟಿನಲ್ಲಿ, ತರ್ಕಬದ್ಧವಾಗಿ, ವ್ಯವಸ್ಥಿತವಾಗಿ ನಡೆಯುವ ಅಧ್ಯಯನಗಳು ಮಾತ್ರ ಜ್ಞಾನ/ಅರಿವು/ತಿಳುವಳಿಕೆ ನೀಡುತ್ತವೆ ಎಂದಲ್ಲ. ಅವುಗಳ ಆಚೆಗೂ ಹಿಂದೆ ಹೇಳಿದಂತೆ ಜ್ಞಾನದ ಉತ್ಪಾದನೆಯಾಗುತ್ತದೆ. ಅವುಗಳೂ ತರ್ಕಬದ್ಧವಾಗಿದ್ದರೆ, ವ್ಯವಸ್ಥಿತವಾದ ಅಧ್ಯಯನದಲ್ಲಿಯೂ ಅವು ಮತ್ತೆ ಸಾಬೀತಾದರೆ ಅವೂ ಸಂಶೋಧನೆಯಲ್ಲಿ ಜಾಗ ಪಡೆಯುತ್ತವೆ. ಆದರೆ ಈ ಪ್ರಶ್ನೆಗಳಿಗೆ ಮತ್ತಷ್ಟು ಆಯಾಮಗಳಿವೆ ಅವುಗಳನ್ನೂ ವಿವರಿಸಿಕೊಳ್ಳುವುದು ಅಗತ್ಯ.

ಮಾಡಿ ಕಲಿ, ನೋಡಿ ಕಲಿ
ತಿಳುವಳಿಕೆ/ಅರಿವು/ಜ್ಞಾನ ಇವುಗಳು ಹೇಗೆ ಬರುತ್ತವೆ ಎಂಬ ಮೂಲಭೂತ ಪ್ರಶ್ನೆ ಇಲ್ಲಿದೆ. ಯಾವುದೇ ತರ್ಕವಿಲ್ಲದೆ, ವ್ಯವಸ್ಥಿತವಾಗಿಲ್ಲದೆ ಇದ್ದರೂ ಕೆಲವೊಮ್ಮೆ ಕೆಲವು ತತ್ವಗಳು ನಮ್ಮ ಅರಿವಿಗೆ ಬರಬಹುದಲ್ಲವೇ? ಹೌದು. ಅನುಭವದ ಆಧಾರದ ಮೇಲೆ ನಮಗೆ ತಿಳುವಳಿಕೆ ದೊರೆಯುತ್ತದೆ. ದೀಪದ ಉರಿಯಲ್ಲಿ ನಮ್ಮ ದೇಹದ ಯಾವುದಾದರು ಭಾಗವನ್ನು ಇಟ್ಟರೆ ನಮಗೆ ಸುಡುವ ಅನುಭವವಾಗುತ್ತದೆ. ಇದನ್ನು ನಾವು ಅನುಭವದ ಮೂಲಕ ಕಂಡುಕೊಳ್ಳಬಹುದು. ಆದರೆ ಪ್ರತಿಯೊಂದನ್ನು ಅನುಭವದ ಮೂಲಕವೇ ಕಂಡುಕೊಳ್ಳುವುದಾದರೆ ಒಬ್ಬರ ಜೀವಿತಾವಧಿಯಲ್ಲಿ ಆ ವ್ಯಕ್ತಿ ಹೆಚ್ಚಿನ ಅರಿವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅಂದರೆ ನಾವು ಬೇರೆಯವರ ಅನುಭವದಿಂದಲೂ ಅರಿವನ್ನು ಪಡೆಯಲು ಸಾಧ್ಯವಿದೆ. ನಾನು ಉರಿಯಲ್ಲಿ ಕೈ ಹಿಡಿಯದೆಯೇ ಕೈ ಇಟ್ಟರೆ ಸುಡುತ್ತದೆ ಎಂದು ತಿಳುವಳಿಕೆ ಪಡೆಯಲು ಸಾಧ್ಯ. ಇವುಗಳು ಮಾಡಿಕಲಿ ಮತ್ತು ನೋಡಿ ಕಲಿ ವಿಧಾನಗಳು. ಆದರೆ ಇವುಗಳಷ್ಟೇ ಜ್ಞಾನವನ್ನು ಪಡೆಯುವ ವಿಧಾನಗಳಲ್ಲ. ನಾನು ಅನುಭವಿಸದೆ, ನೋಡದೆ ಕಲಿಯಲು ಸಾಧ್ಯವಿಲ್ಲವೆ? ಇಲ್ಲಿಯೇ ಜ್ಞಾನದ ಮುಖ್ಯವಾದ ಪ್ರಶ್ನೆಗಳಿರುವುದು. ಇಲ್ಲಿಯೇ ವ್ಯವಸ್ಥಿತವಾದ ಅಧ್ಯಯನ ಎಂಬ ಪ್ರಶ್ನೆ ಮುಖ್ಯವಾಗುವುದು.

ಓದಿ ಕಲಿ-ಜ್ಞಾನ ಮತ್ತು ಭಾಷೆ
ಇಲ್ಲಿ ಭಾಷೆಯ ಪ್ರಶ್ನೆ ಮುಖ್ಯವಾಗುತ್ತದೆ. ಅಂದರೆ ನಾವು ನೋಡಿಲ್ಲದ, ಅನುಭವಿಸಿಲ್ಲದ ವಿಷಯಗಳ ಬಗೆಗಿನ ತಿಳುವಳಿಕೆಯನ್ನು ಬೇರೆ ಯಾರಾದರು ಭಾಷೆಯಲ್ಲಿ ಹಿಡಿದಿಟ್ಟರೆ ಅದನ್ನು ನಾವು ಅರ್ಥಮಾಡಿಕೊಂಡರೆ ಆಗ ಸಹ ನಮಗೆ ಜ್ಞಾನ ಸಿಗುತ್ತದೆ. ಅಂದರೆ ಕೇಳಿ ಕಲಿ, ಓದಿ ಕಲಿ. ಅಂದರೆ ಭಾಷೆಯಮೂಲಕ ಮಾತ್ರ ನಮಗೆ ಜ್ಞಾನ ದೊರೆಯುತ್ತದೆ. ಈ ಭಾಷೆಯೇ ಮನುಷ್ಯಪ್ರಾಣಿಯನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿಸಿರುವುದು. ಈ ಕಾರಣಕ್ಕಾಗಿಯೇ ತತ್ವಶಾಸ್ತ್ತ್ರದಲ್ಲಿ ಮೊದಲಿಗೆ ಇದ್ದ ಶಾಖೆಗಳಲ್ಲಿ ವ್ಯಾಕರಣ (ಗ್ರಾಮರ್) ಮತ್ತು ಭಾಷಾಬಳಕೆಯಶಾಸ್ತ್ತ್ರ (ರೆಟೊರಿಕ್, ಕನ್ನಡದಲ್ಲಿ ರೆಟೊರಿಕ್ಅನ್ನು ಈ ಮೊದಲಿಗೆ ಕೇವಲ ಲಿಭಾಷಣ ಕಲೆಳಿ ಎಂದು ಮಾತ್ರ ಅರ್ಥಮಾಡಿಕೊಂಡು ಭಾಷಾಂತರಿಸಲಾಗಿದೆ/ಪದವನ್ನು ಟಂಕಿಸಲಾಗಿದೆ) ಪ್ರಮುಖವಾಗಿದ್ದವು.

ನಾವು ನೋಡಿದ, ಅನುಭವಿಸಿದ, ಕೇಳಿದ, ಅಧ್ಯಯನ ಮಾಡಿ ಕಲಿತ ವಿಷಯಗಳನ್ನು ನಾವು ಬೇರೆಯವರಿಗೆ (ಮುಂದಿನ ಪೀಳಿಗೆಯವರಿಗೂ ಸೇರಿ) ತಿಳಿಸಬೇಕಾದರೆ ಆ ತಿಳುವಳಿಕೆಯನ್ನು ನಾವು ಭಾಷೆಯಲ್ಲಿ ಹಿಡಿದಿಡಬೇಕಾಗುತ್ತದೆ. ಬೇರೆ ಕಾಲ, ದೇಶದವರಿಗೆ ಅರ್ಥವಾಗುವಂತೆ, ಮನದಟ್ಟಾಗುವಂತೆ ಅದು ಭಾಷೆಯಲ್ಲಿ ನಿರೂಪಿತವಾಗಬೇಕಾಗುತ್ತದೆ. ಆಗ ಮಾತ್ರ ಅದು ಜ್ಞಾನವಾಗುತ್ತದೆ. ನನ್ನ ತಿಳುವಳಿಕೆ/ಅರಿವು/ಜ್ಞಾನ ಭಾಷೆಯನ್ನು ಪ್ರವೇಶಿಸದಿದ್ದಲ್ಲಿ ಅದು ಬೇರೆಯವರ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ನಾವು ಪಡೆದ ಜ್ಞಾನ ಏನು, ಹೇಗೆ ಪಡೆದೆವು, ಪಡೆದ ವಿಧಾನ ಯಾವುದು ಇತ್ಯಾದಿಗಳು ಭಾಷೆಯಲ್ಲಿ ಬರಬೇಕಾಗುತ್ತದೆ. ಇಲ್ಲಿಯೇ ಜ್ಞಾನದ ಮುಖ್ಯವಾದ ಪ್ರಶ್ನೆಗಳಿರುವುದು. ಇಲ್ಲಿಯೇ ವ್ಯವಸ್ಥಿತವಾದ ಅಧ್ಯಯನ ಎಂಬ ಪ್ರಶ್ನೆ ಮುಖ್ಯವಾಗುವುದು.

ಡೆಸರ್ಟೇಶನ್-ಥೀಸಿಸ್
ಈ ಎರಡು ಪದಗಳನ್ನು ನಮ್ಮ ವಿದ್ಯಾರ್ಥಿಗಳು ಮತ್ತು ಇತರರೂ ಸಹ ಸಮಾನಾರ್ಥಕವಾದ ಪದಗಳಾಗಿ ಬಳಸುತ್ತಾರೆ. ಆದರೆ ಇವುಗಳೆರಡರ ನಡುವಿನ ವ್ಯತ್ಯಾಸ ಸಹ ನಮಗೆ ಮುಖ್ಯವಾಗಬೇಕಾಗುತ್ತದೆ. ಥೀಸಿಸ್ ಎನ್ನುವುದು ನಾವು ನಮ್ಮ ಅಧ್ಯಯನದ ಮೂಲಕ ಕಂಡುಕೊಂಡ ಫಲಿತ, ಅದನ್ನು ಹೇಗೆ ಕಂಡುಕೊಂಡೆವು ಎಂದು ನೀಡುವ ವಿವರವಾದ ವರದಿಯೇ ಡೆಸರ್ಟೇಶನ್. ನಮ್ಮಲ್ಲಿ ಡೆಸರ್ಟೇಶನ್ ಬರೆಯುವದನ್ನೇ ಸಂಶೋಧನೆ ಎಂದು ಭಾವಿಸಿಕೊಳ್ಳಲಾಗಿದೆ. ಇದು ಹೆಚ್ಚಾಗಿ ಸಾಹಿತ್ಯದ ಅಧ್ಯಯನಗಳಲ್ಲಿ ಕಂಡುಬರುತ್ತದೆ. ನಾವು ಯಾವುದೋ ಪ್ರಯೋಗದ ಮೂಲಕವೋ, ಅಥವಾ ಕೆಲವು ಆಕರಗಳನ್ನು ವಿಶ್ಲೇಷಿಸಿಯೋ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಳ್ಳುತ್ತೇವೆ. ಈ ಇಡೀ ಪ್ರಕ್ರಿಯೆಯ ವರದಿಯೇ ಡೆಸರ್ಟೇಶನ್. ನಾವು ಸಂಶೋಧನೆಯನ್ನು ಏಕೆ ಆರಂಭಿಸಿದೆವು; ಏಕೆ ಈ ಪ್ರಶ್ನೆಗೇ ಉತ್ತರವನ್ನು ಹುಡುಕಲು ಯತ್ನಿಸಿದೆವು/ಅಥವಾ ಇದನ್ನೆ ಏಕೆ ಊಹಾಸಿದ್ದಾಂತವಾಗಿ ಪರೀಕ್ಷಿಸಿದೆವು; ಈ ವಿಷಯದ ಬಗ್ಗೆ ಇದುವರೆವಿಗೆ ಇರುವ ಜ್ಞಾನದ ಸ್ವರೂಪ ಯಾವುದು (ಲಿಟರೇಚರ್ ಸರ್ವೆ, ಇದುವರೆಗಿನ ಅಧ್ಯಯನಗಳ ಸಮೀಕ್ಷೆ); ನಾವು ನಡೆಸಿದ ಪ್ರಯೋಗ/ವಿಶ್ಲೇಷಣೆ ಯಾವುದು; ಯಾವುದನ್ನು ಆಕರವಾಗಿ, ಉಪಕರಣಗಳಾಗಿ ಬಳಸಿದೆವು, ಅವುಗಳ ವ್ಯಾಪ್ತಿ, ಪ್ರಮಾಣ ಏನು; ಇವುಗಳ ಹಿಂದೆ ಕೆಲಸ ಮಾಡಿದ ಸಿದ್ದಾಂತ ಯಾವುದು; ನಾವು ಬಳಸಿದ ವಿಧಾನಗಳಾವುವು; ಏಕೆ ಅವುಗಳನ್ನೇ ಬಳಸಿದೆವು ಇತ್ಯಾದಿ. ವಿವರಗಳನ್ನು ನಾವು ಡೆಸರ್ಟೇಶನ್ನಲ್ಲಿ ನೀಡಬೇಕಾಗುತ್ತದೆ.

ಜ್ಞಾನದಷ್ಟೇ ಜ್ಞಾನದ ಮಾರ್ಗವೂ ಮುಖ್ಯ
ಇದೇ ಜ್ಞಾನ ಎಂದು ಹೇಳಬೇಕಾದರೆ ಆ ನಿರ್ಧಾರಕ್ಕೆ ನಾವು ಹೇಗೆ ಬಂದೆವು, ಏಕೆ ಬಂದೆವು ಎಂಬುದನ್ನು ಹೇಳಬೇಕಾಗುತ್ತದೆ. ಈ ವಿವರಗಳನ್ನು ಅದೇ ಕ್ಷೇತ್ರದಲ್ಲಿ ನುರಿತ ತಜ್ಞರು ಪರೀಶೀಲಿಸಿ ವ್ಯವಸ್ಥಿತವಾಗಿ ಅಧ್ಯಯನ ನಡೆದಿದೆಯೇ ಇಲ್ಲವೇ ಎಂದು ಹೇಳಬೇಕಾಗುತ್ತದೆ. ಆಗ ಮಾತ್ರ ಅದನ್ನು ವಿಶ್ವವಿದ್ಯಾಲಯಗಳು ಮಾನ್ಯ ಮಾಡಲು ಸಾಧ್ಯ. ಇಲ್ಲದಿದ್ದರೆ ಬೇರೊಬ್ಬರು ನೀವು ಹೇಳಿದ್ದನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ. ಪರೀಕ್ಷಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ವ್ಯವಸ್ಥಿತವಾದ ಅಧ್ಯಯನ ಮುಖ್ಯವಾಗುತ್ತದೆ. ಹಾಗೆಂದ ಮಾತ್ರಕ್ಕೆ ಹಿಂದೆ ಹೇಳಿದಂತೆ ಇತರೆ ಯಾವುದೇ ವ್ಯವಸ್ಥಿತವಾದ ಅಧ್ಯಯನಗಳನ್ನು ಮಾಡದಿರುವವರು ಜ್ಞಾನದ ಉತ್ಪಾದನೆ ಮಾಡಲು ಸಾಧ್ಯವಿಲ್ಲ ಎಂದಲ್ಲ. ಅವರು ತಾವು ಆ ಜ್ಞಾನವನ್ನು ತಲುಪಿದ ಮಾರ್ಗವನ್ನು ಸ್ಪಷ್ಟಪಡಿಸಿದರೆ ಪರೀಕ್ಷಿಸಲು ಅಥವಾ ಅದನ್ನು ಮುಂದುವರೆಸಲು ಸಾಧ್ಯವಿದೆ.

ಉದಾಹರಣೆ ನೀಡಿದರೆ ಇದು ಸ್ಪಷ್ಟವಾಗಬಹುದು. ಅಕಸ್ಮಾತ್ಆಗಿ ಏನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಎರಡು ರಾಸಾಯನಿಕಗಳನ್ನು ತಪ್ಪಿ ಬಳಸಿದಾಗ ಮತ್ತೇನೋ ಉಪಯುಕ್ತವಾದದ್ದು ಆಗಬಹುದು. ಆದರೆ ಅದು ನಮಗೆ ಹೊಳಹನ್ನು ಮಾತ್ರ ನೀಡುತ್ತದೆ. ಅದನ್ನು ಮತ್ತೆ ಪರೀಕ್ಷಿಸಬೇಕಾಗುತ್ತದೆ. ಅವುಗಳನ್ನು ಯಾವ ಪ್ರಮಾಣದಲ್ಲಿ ಬೆರೆಸಬೇಕು, ಯಾವ ತಾಪಮಾನದಲ್ಲಿ ಬೆರಸಬೇಕು ಇತ್ಯಾದಿ ಅಂಶಗಳನ್ನು ಮುಂದಿನ ಸಂಶೋಧನೆ ನಿರ್ಧರಿಸಬೇಕಾಗಿರುವುದರಿಂದ ವ್ಯವಸ್ಥಿತವಾದ ಅಧ್ಯಯನದ ಅಗತ್ಯವಿರುತ್ತದೆ. ನಾನು ಹಿಡಿದ ಮಾರ್ಗಗಳನ್ನು ಸ್ಪಷ್ಟಪಡಿಸುವುದು ಅಗತ್ಯವಿರುತ್ತದೆ. ಏಕೆಂದರೆ ಬೇರೊಂದು ಮಾರ್ಗವನ್ನು ಹಿಡಿದರೆ ಬೇರೆ ಫಲಿತ ಕಾಣಲು ಸಾಧ್ಯವಿರುತ್ತದೆ.

ಮಾರ್ಗದ ಪ್ರಶ್ನೆ-ಎಪಿಸ್ಟಮಾಲಜಿ, ಸಿದ್ದಾಂತ, ವಿಧಾನ, ಆಕರಗಳು ಇತ್ಯಾದಿ.
ತತ್ವಶಾಸ್ತ್ತ್ರದಲ್ಲಿ ಎಪಿಸ್ಟಮಾಲಜಿ ಎಂಬುದೊಂದಿದೆ. ಇದು ಜ್ಞಾನಶಾಸ್ತ್ತ್ರ (ಕನ್ನಡದಲ್ಲಿ ಇದಕ್ಕೆ ಮುಂಚೆ ಪ್ರಮಾಣಶಾಸ್ತ್ತ್ರ ಎಂದೂ ಬಳಸಲಾಗಿದೆ). ಯಾವುದನ್ನು ಜ್ಞಾನ ಎಂದು ಒಪ್ಪಿಕೊಳ್ಳಬೇಕು, ಒಪ್ಪಿಕೊಳ್ಳುವುದಕ್ಕೆ ಪ್ರಮಾಣ ಏನು ಎಂಬುದನ್ನು ಇದು ಹೇಳುತ್ತದೆ. ನೀವು ಯಾವ ಎಪಿಸ್ಟಮಾಲಜಿಯ ಚೌಕಟ್ಟನ್ನು ಒಪ್ಪಿಕೊಳ್ಳುತ್ತೀರಾ ಎಂಬುದರ ಮೇಲೆ ನೀವು ಯಾವುದನ್ನು ಪ್ರಮಾಣ ಎಂದು ಒಪ್ಪಿಕೊಳ್ಳುತ್ತೀರಾ ಮತ್ತು ನೀವು ತಲುಪುವ ನಿರ್ಧಾರ ಯಾವುದು ಎಂಬುದು ತೀರ್ಮಾನಗೊಳ್ಳುತ್ತದೆ. ಆದ್ದರಿಂದ ಸಂಶೋಧಕರು ತಾವು ಬಳಸುತ್ತಿರುವ ಜ್ಞಾನಶಾಸ್ತ್ತ್ರೀಯ ಚೌಕಟ್ಟು ಯಾವುದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಮತ್ತು ಅದರ ಬಗೆಗೆ ಅರಿವಿರಬೇಕಾಗುತ್ತದೆ. ಭಾರತದ ಷಡ್ದರ್ಶನಗಳೆಂದು ಯಾವುದನ್ನು ಕರೆಯುತ್ತಾರೆ ಅವುಗಳ ನಡುವಿನ ವ್ಯತ್ಯಾಸಗಳೂ ಎಪಿಸ್ಟಮಾಲಜಿಕಲ್ ವ್ಯತ್ಯಾಸಗಳಾಗಿದ್ದವು.

ಸಿದ್ದಾಂತ
ಈಗಾಗಲೇ ಹಲವು ರೀತಿಯ ಸಂಗತಿಗಳನ್ನು ಪರೀಕ್ಷಿಸಿ ಸಾಮಾನ್ಯವಾಗಿ ಎಲ್ಲದಕ್ಕೂ ಒಪ್ಪಿತವಾಗುವ ನಿಯಮವೊಂದನ್ನು ರೂಪಿಸಿರುವದೇ ಸಿದ್ದಾಂತ. ಇದನ್ನು ಬಳಸಿ ಮತ್ತೆ ನಾವು ಎಲ್ಲವನ್ನೂ ಕೂಲಂಕುಷವಾಗಿ ಪರೀಶೀಲಿಸದೆ ಕೇವಲ ಅನ್ವಯಿಸಿ ನಿರ್ಧಾರಕ್ಕೆ ಬರಬಹುದು. ಈ ರೀತಿ ಆನ್ವಯಿಕ ಅಥವಾ ಆ ಸಿದ್ದಾಂತದ ಚೌಕಟ್ಟಿನಲ್ಲೇ ಮುಂದುವರೆಸಿ ಸಂಶೋಧನೆ ಮಾಡುವುದಾದರೆ ಸಿದ್ದಾಂತವನ್ನು ನಾವು ಬಳಸುತ್ತೇವೆ. ಇದು ಎಪಿಸ್ಟಮಾಲಜಿಕಲ್ ಚೌಕಟ್ಟನ್ನು ನಿರ್ಧರಿಸಿದ ನಂತರದ ಹಂತ. ಒಂದು ಸಂಗತಿಯನ್ನು ಕುರಿತು ಒಂದೇ ಎಪಿಸ್ಟಮಾಲಜಿಕಲ್ ಚೌಕಟ್ಟಿನಲ್ಲಿ ಹಲವು ಸಿದ್ದಾಂತಗಳಿರಬಹುದು. ಉದಾಹರಣಗೆ ಉದಾರವಾದಿ ಸಿದ್ದಾಂತ ಮತ್ತು ಮಾರ್ಕ್ಸ್ವಾದಿ ಸಿದ್ದಾಂತಗಳು ಒಂದೇ ಎಪಿಸ್ಟಮಾಲಜಿಕಲ್ ಚೌಕಟ್ಟನ್ನು ಹೊಂದಿದ್ದರೂ ಅವುಗಳು ಸಂಗತಿಗಳನ್ನು ಪ್ರಕ್ರಿಯೆಗಳನ್ನು ಗ್ರಹಿಸುವ/ತೀರ್ಮಾನಿಸುವ ರೀತಿ ಬೇರೆಯಾಗಿರುತ್ತದೆ. ಆದ್ದರಿಂದ ಸಂಶೋಧಕರಿಗೆ ತಾವು ಯಾವ ಸಿದ್ದಾಂತವನ್ನು ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಅರಿವಿರಬೇಕಾಗುತ್ತದೆ. ಇವತ್ತು ಹೆಚ್ಚಿನ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳು ವಿಭಿನ್ನ ಸಿದ್ದಾಂತಗಳ ಹಿನ್ನಲೆಯಲ್ಲಿನ ವಿಚಾರಗಳನ್ನು ಅವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತೆ ತಮ್ಮ ವರದಿಯಲ್ಲಿ ತಮ್ಮ ನಿರ್ಧಾರದ ಬೆಂಬಲಕ್ಕೆ ಉಲ್ಲೇಖಿಸುತ್ತಾರೆ. ಈ ಸಮಸ್ಯೆಗೆ ಕಾರಣವೇನೆಂದರೆ ಅವರಿಗೆ ವಿಭಿನ್ನ ಸಿದ್ದಾಂತಗಳ ಅರಿವಿಲ್ಲದಿರುವುದು, ಇದ್ದರೂ ಕೇವಲ ಅವುಗಳನ್ನು ಸಿದ್ದಾಂತವಾಗಿ ಮಾತ್ರ ಗ್ರಹಿಸಿರುವುದರಿಂದ, ತಾವು ಅವಲಂಬಿಸುವ ನಿರ್ಧಾರಗಳ ಹಿಂದೆ ಯಾವ ಸಿದ್ದಾಂತ ಕೆಲಸ ಮಾಡಿದೆ ಎಂಬುದನ್ನು ಗ್ರಹಿಸುವಲ್ಲಿ ವಿಫಲರಾಗುತ್ತಾರೆ.

ವಿಧಾನ
ವಿಧಾನದ ಪ್ರಶ್ನೆಯೂ ಸಂಶೋಧನೆಯಲ್ಲಿ ಬಹಳ ಮುಖ್ಯವಾದದ್ದು. ನಾವು ಯಾವ ಆಕರಗಳನ್ನು ಬಳಸಿ ಅವುಗಳ ವಿಶ್ಲೇಷಣೆಯ ಮೂಲಕ ನಾವು ಹಾಕಿಕೊಂಡಿದ್ದ ಸಂಶೋಧನಾ ಪ್ರಶ್ನೆಗೆ ಉತ್ತರ ಹುಡುಕುತ್ತೇವೆ ಅವುಗಳನ್ನು ವಿಶ್ಲೇಷಿಸುವ ವಿಧಾನಕ್ಕೆ (ಮಾನವಿಕ ಮತ್ತು ಸಮಾಜವಿಜ್ಞಾನಗಳಲ್ಲಾದರೆ), ಯಾವ ಪರಿಕರಗಳನ್ನು ಬಳಸಿ ಪ್ರಯೋಗವನ್ನು ಮಾಡುತ್ತೇವೊ ಅದರ ವಿಧಾನಕ್ಕೆ ನಾವು ಗಮನ ನೀಡಬೇಕಾಗುತ್ತದೆ. ನಾವು ಭಿನ್ನ ವಿಧಾನಗಳನ್ನು ಬಳಸಿದರೆ ಭಿನ್ನ ತೀರ್ಮಾನಕ್ಕೆ ತಲುಪಲು ಸಾಧ್ಯವಿರುತ್ತದೆ. ಇನ್ನೊಂದು ಅಂಶವನ್ನು ನಾವು ಗಮನಿಸಬೇಕಾದದ್ದು ಏನೆಂದರೆ, ವಿಧಾನಗಳ ಹಿಂದೆ ಸಿದ್ದಾಂತಗಳು ಕೆಲಸ ಮಾಡುತ್ತಿರುತ್ತವೆ. ನಾನು ಹಾಕಿಕೊಂಡ ಸೈದ್ದಾಂತಿಕ ಚೌಕಟ್ಟಿಗೆ ಅನುಗುಣವಾಗಿ ನಮ್ಮ ವಿಧಾನವಿರಬೇಕಾಗುತ್ತದೆ. ಒಂದೇ ಸಿದ್ದಾಂತದ ಅಡಿಯಲ್ಲಿ ಭಿನ್ನ ವಿಧಾನಗಳಿರಲು ಸಾಧ್ಯ. ಏಕೆಂದರೆ ಕೆಲವೊಮ್ಮೆ ಆಕರಗಳು/ಪರಿಕರಗಳಿಗೆ ಅನುಗುಣವಾಗಿ ವಿಧಾನವೂ ಬದಲಾಗಬೇಕಾಗುತ್ತದೆ. ಉದಾಹರಣೆಗೆ, ಒಂದು ಕವನವನ್ನು ವಿಶ್ಲೇಷಿಸುವ ವಿಧಾನಕ್ಕೂ, ಆತ್ಮಚರಿತ್ರೆಯನ್ನು ವಿಶ್ಲೇಷಿಸುವ ವಿಧಾನಕ್ಕೂ, ಒಂದು ಕಾದಂಬರಿಯನ್ನು ವಿಶ್ಲೇಷಿಸುವ ವಿಧಾನಕ್ಕೂ, ಮೌಖಿಕ ಕಾವ್ಯವನ್ನು ವಿಶ್ಲೇಷಿಸುವ ವಿಧಾನಕ್ಕೂ, ಭಾಷಣವನ್ನು ವಿಶ್ಲೇಷಿಸುವ ವಿಧಾನಕ್ಕೂ ವ್ಯತ್ಯಾಸವಿರುತ್ತದೆ. ಮತ್ತು ಒಂದೇ ಪ್ರಕಾರವನ್ನು (ಈ ಸಾಹಿತ್ಯ ಆಕರಗಳ ಉದಾಹರಣೆಯಲ್ಲಿ) ವಿಶ್ಲೇಷಿಸುವುದಕ್ಕೆ ಭಿನ್ನ ವಿಧಾನಗಳಿರಲು ಸಾಧ್ಯ. ಈ ವ್ಯತ್ಯಾಸ ಸಿದ್ದಾಂತ ಮತ್ತು ಎಪಿಸ್ಟಮಾಲಜಿಯನ್ನು ಅವಲಂಬಿಸಿರುತ್ತದೆ.

ಪ್ರಾಕಲ್ಪನೆ/ಊಹಾ ಸಿದ್ದಾಂತ-ಸಂಶೋಧನಾ ಪ್ರಶ್ನೆ
ಸಾಮಾನ್ಯವಾಗಿ ಸಂಶೋಧನೆ ಮಾಡಲು ಹೈಪಾಥಿಸಿಸ್ (ಕನ್ನಡದಲ್ಲಿ ಇದನ್ನು ಊಹಾಸಿದ್ದಾಂತವೆಂದು ಕೆಲವರು, ಮತ್ತೆ ಕೆಲವರು ಪ್ರಾಕಲ್ಪನೆ ಎಂದು ಭಾಷಾಂತರಿಸಿದ್ದಾರೆ) ಇರಬೇಕೆಂದು ಹೇಳುತ್ತಾರೆ. ಬಹಳಷ್ಟು ಸಂಶೋಧನೆ ಎಂದರೇನೆಂದು ಹೇಳಿಕೊಡುವ ಪುಸ್ತಕಗಳಲ್ಲೂ ಈ ಅಂಶ ಪ್ರಸ್ತಾಪವಾಗುತ್ತದೆ. ಇದು ಸಾಮಾನ್ಯವಾಗಿ ವಿಜ್ಞಾನವಿಷಯಗಳಲ್ಲಿ ಸಂಶೋಧನೆ ನಡೆಸುವಾಗ ಬಳಕೆಯಾಗುವ ಪರಿಭಾಷೆ. ಅಲ್ಲಿ ಪ್ರಯೋಗದ ಆರಂಭಕ್ಕೆ ಮುನ್ನವೇ ಈ ಪರಿಕರಗಳನ್ನು ಈ ವಿಧಾನದಲ್ಲಿ ಪ್ರಯೋಗಿಸಿದಾಗ ಈ ಕಾಲಾವಧಿಯಲ್ಲಿ, ನಿರ್ದಿಷ್ಟವಾದ ಕೆಲವು ಅಂಶಗಳು ಕಾನ್ಸ್ಟಂಟ್(ತಟಸ್ಥ/ಬದಲಾಗದಿದ್ದರೆ) ಆಗಿದ್ದರೆ ಈ ರೀತಿಯ ಫಲಿತ ದೊರೆಯುತ್ತದೆ ಎಂದು ಭಾವಿಸಲಾಗುತ್ತದೆ. ನಂತರ ಅದನ್ನು ಪರೀಕ್ಷಿಸಲಾಗುತ್ತದೆ. ಪ್ರಯೋಗ ಯಶಸ್ವಿಯಾದರೂ ಅದು ಜ್ಞಾನವೇ, ಯಶಸ್ವಿಯಾಗದಿದ್ದರೂ ಅದು ಜ್ಞಾನವೇ. ಆ ರೀತಿ ಮಾಡುವುದರಿಂದ ನೀರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ ಎಂದು ತೀರ್ಮಾನಕ್ಕೆ ಬರುವುದೂ ಕೂಡ ಜ್ಞಾನವೇ.

ಆದರೆ ಸಮಾಜವಿಜ್ಞಾನಗಳಲ್ಲಿ ಮತ್ತು ಮಾನವಿಕಗಳಲ್ಲಿ ಈ ರೀತಿಯ ಊಹೆ, ಕಲ್ಪನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಪ್ರಯೋಗ ನಡೆಸಲಾಗುವುದಿಲ್ಲ, ಮತ್ತು ಸಾಮಾಜಿಕ, ರಾಜಕೀಯ, ಚಾರಿತ್ರಿಕ, ವ್ಯಕ್ತಿಗತ, ಮಾನಸಿಕ ಅಂಶಗಳನ್ನು ಬದಲಾಗದಂತೆ, ತಟಸ್ಥಗೊಳಿಸಲು ಬರುವುದಿಲ್ಲ. ಆದ್ದರಿಂದ ಇಲ್ಲಿ ಊಹಾಸಿದ್ದಾಂತ ಅಥವಾ ಪ್ರಾಕಲ್ಪನೆ ಎಂಬ ಪರಿಕಲ್ಪನೆಯ ಬದಲಾಗಿ ಸಂಶೋಧನಾ ಪ್ರಶ್ನೆ ಎಂಬುದನ್ನು ಬಳಸುವುದು ಉಪಯುಕ್ತವಾಗುತ್ತದೆ. ಏಕೆ ಕರಾವಳಿ ಪ್ರದೇಶಗಳಲ್ಲಿ ಸಾಮುದಾಯಿಕ ಘರ್ಷಣೆಗಳು ಹೆಚ್ಚಾಗುತ್ತಿವೆ?; ಕನ್ನಡ ಸುದ್ದಿ ಮಾಧ್ಯಮಗಳ ಭಾಷೆಯಲ್ಲಿ ಗಮನಾರ್ಹ ಪಲ್ಲಟವಾಗುತ್ತಿದೆಯೇ? ಏಕೆ? ಅದರ ಪರಿಣಾಮಗಳೇನು?; ಭಾರತದಲ್ಲಿ ಕಪ್ಪುಹಣದ ಪರಿಮಾಣವನ್ನು ಮತ್ತು ಪರಿಣಾಮವನ್ನು ಅಳೆಯಲು ಸಾಧ್ಯವೇ? ಕನ್ನಡ ಬ್ಲಾಗ್ಗಳ ಆರಂಭವು ಕನ್ನಡ ಗುರುತಿನ ಮೇಲೆ, ಅದನ್ನು ನಾವು ಪರಿಭಾವಿಸಿಕೊಂಡಿರುವುದರ ಮೇಲೆ ಬೀರುವ ಪರಿಣಾಮಗಳೇನು? ಇತ್ಯಾದಿ ಪ್ರಶ್ನೆಗಳನ್ನು ರೂಪಿಸಿಕೊಂಡು ಸಂಶೋಧನೆಯ ಮೂಲಕ ನಾವು ಉತ್ತರವನ್ನು ಹುಡುಕಿ ಜ್ಞಾನವನ್ನು ಉತ್ಪಾದಿಸಲು ಸಾಧ್ಯ. ಆದ್ದರಿಂದ ನನ್ನ ದೃಷ್ಟಿಯಲ್ಲಿ ನಾವು ಬಳಸುವ ಸಂಶೋಧನೆ ಎಂದು ಹೇಳುವ ಪುಸ್ತಕಗಳಲ್ಲಿ ಸಾಮಾನ್ಯವಾಗಿ ಕಾಣುವ ಉಹಾಸಿದ್ದಾಂತ, ಪ್ರಾಕಲ್ಪನೆ ಇತ್ಯಾದಿಗಳನ್ನು ಬದಿಗಿಟ್ಟು ನಾವು ಯಾವ ಪ್ರಶ್ನೆಗೆ/ಗಳಿಗೆ ಈ ಸಂಶೋಧನೆಯ ಮೂಲಕ ಉತ್ತರವನ್ನು ಹುಡುಕುತ್ತಿದ್ದೇವೆ ಎಂದು ಸ್ಪಷ್ಟಪಡಿಸಿಕೊಳ್ಳುವುದು ಉತ್ತಮ.

ಜ್ಞಾನವೂ ಆತ್ಯಂತಿಕವಲ್ಲ
ಮೂಲ ಪ್ರಶ್ನೆಗೆ ಮತ್ತೆ ಹಿಂತಿರುಗುವುದಾದರೆ, ಸತ್ಯವನ್ನು ಆತ್ಯಂತಿಕವಾಗಿ ನೋಡುವುದು ಸರಿಯಲ್ಲ ಎನ್ನುವುದಾದರೆ ಜ್ಞಾನ ಎಂಬ ಮತ್ತೊಂದು ಪದವನ್ನು ಸಂಶೋಧನೆಯ ವ್ಯಾಖ್ಯಾನದಲ್ಲಿ ಅದರ ಬದಲಿಗೆ ಸೇರಿಸಿದ ತಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಜ್ಞಾನವೂ ಆತ್ಯಂತಿಕವಲ್ಲ. ನಾವು ಕಂಡುಕೊಂಡಿರುವ ಜ್ಞಾನ (ಅಂದರೆ ನಾವು ಹಾಕಿಕೊಂಡಿದ್ದ ಸಂಶೋಧನಾ ಪ್ರಶ್ನೆಗೆ ದೊರಕಿರುವ ಉತ್ತರ) ನಾವು ಅನುಸರಿಸಿದ ಎಪಿಸ್ಟಮಾಲಜಿಕಲ್ ಚೌಕಟ್ಟು, ಸೈದ್ದಾಂತಿಕ ಚೌಕಟ್ಟು, ನಾವು ವಿಶ್ಲೇಷಿರುವ ಆಕರಗಳು (ಅವುಗಳ ವ್ಯಾಪ್ತಿ, ಸಂಖ್ಯೆ, ಪರಿಮಾಣ ಮತ್ತು ಅವುಗಳನ್ನು ಆಯ್ಕೆ ಮಾಡಿಕೊಂಡ ಮಾನದಂಡ), ವಿಶ್ಲೇಷಣೆಗೆ ಬಳಸಿದ ವಿಧಾನ/ಗಳು ಇವುಗಳಿಗೆ ಅನುಗುಣವಾಗಿರುತ್ತದೆ. ಇವುಗಳಲ್ಲಿ ಯಾವುದೊಂದು ವ್ಯತ್ಯಾಸವದರೂ ನಾವು ಕಂಡುಕೊಂಡ ಉತ್ತರವೂ ಬದಲಾಗುತ್ತಿತ್ತು. ಆದ್ದರಿಂದ ಈ ಜ್ಞಾನವೂ ಕೂಡ ಆತ್ಯಂತಿಕವಲ್ಲ ಎಂಬ ಎಚ್ಚರ ನಮಗೆ ಇರಬೇಕಾಗುತ್ತದೆ. ಮತ್ತು ನಮ್ಮ ಸಂಶೋಧನೆಯ ಎಪಿಸ್ಟಮಾಲಜಿಕಲ್ ಚೌಕಟ್ಟು, ಸೈದ್ದಾಂತಿಕ ಚೌಕಟ್ಟು, ವಿಧಾನ, ಆಕರಗಳ ಸ್ವರೂಪ/ಆಯ್ಕೆ, ಉದ್ದೇಶ/ಸಂಶೋಧನಾ ಪ್ರಶ್ನೆ ಇವುಗಳನ್ನು ವಿವರವಾಗಿ ಸಂಶೋಧನಾ ವರದಿಯಲ್ಲಿ ಮಂಡಿಸಬೇಕಾಗುತ್ತದೆ.

ಸಂಶೋಧನೆಯಲ್ಲಿ ಈ ರೀತಿಯ ಎಚ್ಚರ ಇಲ್ಲದಿದ್ದರೆ ಸಾಮಾಜಿಕ ಅನಾಹುತಗಳಾಗುತ್ತವೆ. ಆ ರೀತಿಯ ಸಾಕಷ್ಟು ಅನಾಹುತಗಳನ್ನು ನಾವು ಕಾಣಬಹುದು. ಉದಾಹರಣೆಗೆ, ಯಾರೊ ಒಬ್ಬರು ಭಾರತದಲ್ಲಿ ಬ್ರಿಟಷರು ಬರುವುದಕ್ಕೆ ಮುಂಚೆ ಜಾತಿವ್ಯವಸ್ಥೆ ಇರಲಿಲ್ಲ ಎಂದು ಊಹಾಸಿದ್ದಾಂತ ಇಟ್ಟುಕೊಂಡು ಸಂಶೋಧನೆಗೆ ಹೊರಡುತ್ತಾರೆ, ಸಂಶೋಧನೆ ಮುಗಿಯುವ ಮುಂಚೆಯೇ ಆ ಊಹಾ ಸಿದ್ದಾಂತವೇ ಸರಿ ಎಂದು ವಾದಿಸಲು ಹೊರಡುತ್ತಾರೆ, ಮತ್ತು ತಮ್ಮ ವಾದವನ್ನು ಸಮರ್ಥಿಸುವ ಅಂಶಗಳನ್ನಷ್ಟೇ ತಮ್ಮ ಸಂಶೋಧನೆಯಲ್ಲಿ ಕಾಣುತ್ತಾರೆ (ಅದಕ್ಕೆ ವಿರುದ್ಧವಾದ ಅಂಶಗಳನ್ನು ನೋಡವುದಕ್ಕೆ ಅವರ ನಂಬಿಕೆ ಅವರಿಗೆ ದಾರಿ ಮಾಡಿಕೊಡುವುದಿಲ್ಲ), ಅದನ್ನೇ ತೀರ್ಮಾನವೆಂದು ಭಾವಿಸುತ್ತಾರೆ. ಈ ರೀತಿಯ ತಪ್ಪುಗಳು- ಒಂದೇ ಸಂಶೋಧನೆಯಲ್ಲಿ ಎಪಿಸ್ಟಮಾಲಜಿಕಲ್ ಮತ್ತು ಸೈದ್ದಾಂತಿಕ ಜಿಗಿತಗಳು; ಊಹಾ ಸಿದ್ದಾಂತವೆಂದು ಭಾವಿಸಿ ಸಂಶೋಧನೆಗೆ ಮುಂಚೆಯೇ ಅದನ್ನು ತೀರ್ಮಾನವೆಂದು ಭಾವಿಸಿಕೊಳ್ಳುವುದು; ಅದಕ್ಕೆ ಅನುಗುಣವಾದದ್ದನ್ನು ಮಾತ್ರ ಹೆಕ್ಕಿ ಆಕರವಾಗಿಸಿಕೊಳ್ಳುವುದು, ಅಥವಾ ಅದಕ್ಕೆ ವಿರುದ್ಧವಾದದ್ದು, ವಿಪರೀತವಾದದ್ದು ದೊರಕಿದರೆ ಅದನ್ನು ಕಾಣದೆ ಇರುವಂತಹ ತಪ್ಪುಗಳು ಇವೆಲ್ಲವೂ ಇಂದು ಸಂಶೋಧನೆಯ ಕ್ಷೇತ್ರದಲ್ಲಿ ರಾರಾಜಿಸುತ್ತಿದೆ.

ಇಂದು 21ನೇ ಶತಮಾನವನ್ನು knowledge economy ಎಂದು ಕರೆಯುತ್ತಿದ್ದಾರೆ. Knowledge ಅನ್ನು capital ಎಂದು ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಸಂಶೋಧನೆಗೆ, ಉನ್ನತಶಿಕ್ಷಣಕ್ಕೆ ಪ್ರಾಶಸ್ತ್ಯ ದೊರಕುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಜ್ಞಾನದ/ಅರಿವಿನ/ತಿಳುವಳಿಕೆಯ ಉತ್ಪಾದನೆಯ ನೆಲೆಯಾದ ಸಂಶೋಧನೆಯ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಂಡು, ಅದಕ್ಕೆ ಉತ್ತರಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಏಕೆಂದರೆ ಈ ಪುಟ್ಟ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳು ಸರ್ವಪರಿಹಾರಿ ಅಲ್ಲ. ಇವುಗಳು ಮಾನವಿಕ ಮತ್ತು ಸಮಾಜವಿಜ್ಞಾನಗಳಲ್ಲಿನ ನನ್ನ ಕೆಲವು ವರ್ಷಗಳ ಕೆಲಸದ ಹಿನ್ನೆಲೆಯಲ್ಲಿ ರೂಪಿತವಾದ ಕೆಲವೇ ಅಂಶಗಳ ಹಿನ್ನೆಲೆಯಲ್ಲಿನ ಕಿರುಟಿಪ್ಪಣಿ ಮಾತ್ರ.

My Blog List