Friday, January 15, 2010

ಸಮಕಾಲೀನ ಸಂದರ್ಭದಲ್ಲಿ ಸಿದ್ಧಾಂತ: ತಲ್ಲಣಗಳೋ ಅಥವಾ ದಾರಿದೀಪಗಳೋ?

ತಾರಕೇಶ್ವರ್ ವಿ.ಬಿ.
ಸಂವಾದ ಮಾಸ ಪತ್ರಿಕೆಯ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ
ಅಕಾಡೆಮಿಕ್ ವಲಯಗಳಲ್ಲಿ ಇತ್ತೀಚೆಗೆ ಸಿದ್ಧಾಂತ (theory) ಎನ್ನುವುದನ್ನು ಬಹಳ ಸೀಮಿತ ಅರ್ಥದಲ್ಲಿ ಬಳಸಲಾಗುತ್ತಿದೆ. ಹೀಗೆ ಬಳಕೆ ಮಾಡುವಾಗ ಸಿದ್ದಾಂತ ಎನ್ನುವುದನ್ನು ಕ್ಯಾಪಿಟಲ್ Tಯಿಂದಲೇ ಆರಂಭಿಸುತ್ತಾರೆ. ಕ್ಯಾಪಿಟಲ್ Tಯಿಂದ ಆರಂಭಿಸಿದಾಗ ಅದರ ಅರ್ಥ ಸಂರಚನೋತ್ತರ ಅಥವಾ ಆಧುನಿಕೋತ್ತರ ಸಿದ್ಧಾಂತಗಳು ಎಂದು ಅರ್ಥ. ಇವೆರಡೂ ಒಂದೇ ಅಲ್ಲ, ಆದರೂ ಅವುಗಳನ್ನು ಸಮಾನಾರ್ಥಕ ಪದಗಳಾಗಿ ಬಳಸಲಾಗುತ್ತದೆ. ಇದರ ಬಗ್ಗೆ ನಂತರ ಮಾತನಾಡುತ್ತೇನೆ. ಇವುಗಳನ್ನು ಆಧುನಿಕ ಸಿದ್ಧಾಂತಗಳಿಗೆ ವಿರುದ್ಧವಾದ ಸಿದ್ಧಾಂತಗಳಾಗಿ ಭಾವಿಸಲಾಗುತ್ತದೆ. ನಾವು ಇದುವರೆವಿಗೆ ನಂಬಿಕೊಂಡು ಬಂದ ಸಿದ್ಧಾಂತಗಳು ನಮ್ಮ ನೋಟವನ್ನು ನಿರ್ಧರಿಸುತ್ತಿದ್ದವು. ನಾವು ನೋಡಿದ್ದನ್ನು ಗ್ರಹಿಸಲು, ಗ್ರಹಿಸಿದ್ದನ್ನು ಒಳ್ಳೆಯದು, ಕೆಟ್ಟದು ಎಂದು ನಿರ್ಧರಿಸಲು ಸಹಾಯಕವಾಗಿದ್ದವು. ನಾವು ನೋಡಿದ್ದನ್ನು ನಮಗೆ ಸರಿ ಎನಿಸದಿದ್ದರೆ ಬದಲಾಯಿಸಲು ಸಹ ಇವುಗಳು ಸಹಾಯಕವಾಗಿದ್ದವು. ಈ ಸಿದ್ಧಾಂತಗಳನ್ನು ಕುರಿತು ಮೂಲಭೂತ ಪ್ರಶ್ನೆಗಳನ್ನು theoryಇಂದು ಕೇಳುತ್ತದೆ. ಈ ಮೂಲಭೂತ ಪ್ರಶ್ನೆಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಈ ಕಾರಣದಿಂದಾಗಿಯೇ theoryಎನ್ನುವುದು ನಮ್ಮ ತಲ್ಲಣಗಳಿಗೆ ಕಾರಣವಾಗಿದೆ.
ನಾವು ಇದುವರೆವಿಗೆ ನಂಬಿಕೊಂಡು ಬಂದ ಆಧುನಿಕ ಸಿದ್ಧಾಂತಗಳ ಪ್ರಮುಖ ಲಕ್ಪ್ಷಣಗಳನ್ನು ವಿವರಿಸಿದರೆ ಹೊಸ ಸಿದ್ಧಾಂತಗಳು ಮೂಡಿಸಿರುವ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಬಹುದು. ಆಧುನಿಕತೆಯು ಸಮುದಾಯದ ಜಾಗದಲ್ಲಿ ವ್ಯಕ್ತಿಗಳನ್ನು (individuals) ರೂಪಿಸುತ್ತದೆ. ವ್ಯಕ್ತಿಗಳು ತಮ್ಮ ವೈಚಾರಿಕತೆಯನ್ನು (rationality-reason) ಉಪಯೋಗಿಸಿ ತಮ್ಮ ಬದುಕನ್ನು ಅರ್ಥಮಾಡಿಕೊಳ್ಳುತ್ತಾರೆ, ರೂಪಿಸಿಕೊಳ್ಳುತ್ತಾರೆ. ಆಧುನಿಕತೆಯ ಸಂದರ್ಭದಲ್ಲಿ ಅದು ಗುರುತಿಸುವ ಏಕ ಮಾತ್ರ ಸಮುದಾಯವೆಂದರೆ, ರಾಷ್ಟ್ರ’ ಮಾತ್ರ. ಪ್ರತಿಯೊಬ್ಬ ವ್ಯಕ್ತಿಯು ರಾಷ್ಟ್ರದ ಪ್ರಜೆಯಾಗಿರುತ್ತಾರೆ, ಇನ್ನಾವುದೇ ರೀತಿಯ ಗುರುತುಗಳು (identity) ಅವರಿಗೆ ಇರುವುದಿಲ್ಲ, ಇರಕೂಡದು. ರಾಷ್ಟ್ರವು ಜಾತ್ಯತೀತ (secular) ನೆಲೆಯಲ್ಲಿ ಕೆಲಸ ಮಾಡಬೇಕು, ಪ್ರತಿಯೊಬ್ಬ ಪ್ರಜೆಯು ಸಮಾನ ಹಕ್ಕುಗಳು ಮತ್ತು ಭಾದ್ಯತೆಗಳನ್ನು ಹೊಂದಿದವರಾಗಿರುತ್ತಾರೆ. ತಮಗೆ ಸರಿ ಎನ್ನಿಸಿದ ರೀತಿಯಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಅನುಸರಿಸಿ ತಮ್ಮ ರಾಷ್ಟ್ರದ ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಎನ್ನುವುದನ್ನು ನಮ್ಮ ಇದುವರೆಗಿನ ಸಿದ್ಧಾಂತಗಳು ತಾತ್ವಿಕವಾಗಿ (ideologically) ಒಪ್ಪಿದ್ದವು.
ವೈಚಾರಿಕತೆಯ ಮೂಲಕ ನಮ್ಮ ಸುತ್ತಮುತ್ತಲಿನ ವಿದ್ಯಮಾನವನ್ನು (ಅಂದರೆ ವಾಸ್ತವವನ್ನು) ಯಥಾವತ್ತಾಗಿ ಗ್ರಹಿಸಲು ಸಾಧ್ಯ ಎಂಬುದು ಇದರ ಮೂಲ ತಳಹದಿಯಾಗಿತ್ತು. ಪ್ರತಿಯೊಬ್ಬ ವ್ಯಕ್ತಿ ಬೇರೆಬೇರೆಯಾಗಿ ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಬಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಸಾರ್ವಜನಿಕ ವಲಯದಲ್ಲಿ (public sphere) ಚರ್ಚೆಗಿಡುವ ಮೂಲಕ ಬಗೆಹರಿಸಿಕೊಳ್ಳಬಹುದು. ಚರ್ಚೆಯ ತಳಹದಿ rationality. ವೈಯಕ್ತಿಕ ಆಸೆ, ಆಕಾಂಕ್ಷೆಗಳು ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ (liberty, equality, fraternity) ದಾರಿ ಮಾಡಿಕೊಡಬೇಕು. ನಾವು ಸ್ವತಂತ್ರರು, ನಮಗಿಷ್ಟ ಬಂದಂತೆ ನಾವಿರಹುದು, ಆದರೆ ಅದು ಇನ್ನೊಬ್ಬರ ಸ್ವಾತಂತ್ರ್ಯಹರಣ ಮಾಡಬಾರದು, ಮಾಡಿದರೆ ಅದು ಸಮಾನತೆ ಮತ್ತು ಭಾತೃತ್ವ ತತ್ವದ ಉಲ್ಲಂಘನೆಯಾಗುತ್ತದೆ.
ಇದನ್ನು ಸ್ಥೂಲವಾಗಿ ಆಧುನಿಕತೆಯ ಪ್ರಮುಖ ಲಕ್ಷಣಗಳು ಎಂದು ಭಾವಿಸಬಹುದು. ಇದನ್ನು ಸಾಮಾನ್ಯವಾಗಿ ಆಧುನಿಕತೆಯ ತಾತ್ವಿಕತೆ ಎಂದು ಒಪ್ಪಲಾಗಿದೆ. ಆದರೆ ಇದು ಅದರಲ್ಲಿನ ಉದಾರವಾದಿ ಮಾನವತಾವಾದಿ ಸಿದ್ಧಾಂತ (ಲಿಬೆರಲ್ humanism) ಎಂಬುದು ಮಾತ್ರ ಎನ್ನುವುದನ್ನು ಸಾಮಾನ್ಯವಾಗಿ ಮರೆಯಲಾಗುತ್ತದೆ. ಇದು ಆಧುನಿಕತೆಯ ಹಲವು ಸಿದ್ಧಾಂತಗಳಲ್ಲಿ ಒಂದು ಮಾತ್ರ. ಇದರಷ್ಟೇ ಮಹತ್ವವಾದ ಮತ್ತೊಂದು ಆಧುನಿಕ ಸಿದ್ಧಾಂತ ಎಂದರೆ, ಮಾರ್ಕ್ಸ್‌ವಾದಿ ಸಿದ್ಧಾಂತ. ಆಧುನಿಕತೆಯ ಉದಾರವಾದಿ ಮಾನವತಾವಾದಿ ಅವತಾರವು ಬಂಡವಾಳಶಾಹಿಯನ್ನು ಒಪ್ಪುತ್ತದೆ, ಖಾಸಗಿ ಆಸ್ತಿಯ ಹಕ್ಕನ್ನು ಪ್ರತಿಪಾದಿಸುತ್ತದೆ. ಆಧುನಿಕತೆಯ ತಾತ್ವಿಕತೆಗೂ ಬಂಡವಾಳಶಾಹಿಯ ಉಗಮಕ್ಕೂ ಸಂಬಂಧವಿದೆ. ಯೂರೋಪಿನ ಊಳಿಗ-ಮಾನ್ಯ ವ್ಯವಸ್ಥೆಯಿಂದ ಗುಲಾಮರನ್ನು ಬಿಡಿಸುವುದು ಬಂಡವಾಳಶಾಹಿಗೆ ಅಗತ್ಯವಿತ್ತು. ಹಾಗೆಯೇ ಹಳೆಯ ವ್ಯವಸ್ಥೆಯನ್ನು ಸಮರ್ಥಿಸುವ ಧರ್ಮವನ್ನು ಸುಧಾರಿಸಿ (reform), ಧರ್ಮವನ್ನು ರಾಜಕೀಯ ಮತ್ತು ಮಾರುಕಟ್ಟೆಯಿಂದ ದೂರವಿರಿಸುವುದು ಅದಕ್ಕೆ ಅಗತ್ಯವಿತ್ತು. ಅದು ಬೇರೆಯದೇ ಆದ ಕಥೆ, ಸದ್ಯಕ್ಕೆ ಇಲ್ಲಿ ಬೇಡ.
ಈ ರೀತಿಯ ಆಧುನಿಕತೆಯ ಒಡಲಲ್ಲೇ ಬಂಡವಾಳಶಾಹಿಯನ್ನು ವಿರೋಧಿಸಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳನ್ನು ಪ್ರತಿಪಾದಿಸುವ ಮಾರ್ಕ್ಸ್‌ವಾದಿ ಸಿದ್ಧಾಂತ ಉಗಮಗೊಂಡಿತು. ನಮ್ಮ ಸುತ್ತಲಿನ ಸಮಾಜವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಲು ವೈಚಾರಿಕತೆಯನ್ನು ಇದು ಪ್ರತಿಪಾದಿಸಿದರೂ, ಅದನ್ನು ಬದಲಾಯಿಸುವಲ್ಲಿ ಕೆಲವೊಮ್ಮೆ ಹಿಂಸೆ ಅನಿವಾರ್ಯ ಎನ್ನುತ್ತದೆ ಈ ವಾದ. ಸಮಾಜ, ವರ್ಗದ ಆಧಾರದಲ್ಲಿ ಶ್ರೇಣೀಕೃತಗೊಂಡಿದೆ, ಮೇಲಿನ ಶ್ರೇಣಿಯಲ್ಲಿನ ವರ್ಗದವರು ತಮ್ಮ ಸವಲತ್ತುಗಳನ್ನು ಸುಲಭವಾಗಿ ಬಿಟ್ಟುಕೊಡಲಾರರು, ಅವರು ಬಿಟ್ಟು ಕೊಡದ ಹೊರತು ನಿಜವಾದ ಸಮಾನತೆ (ಆರ್ಥಿಕ ಸಮಾನತೆ) ದೊರೆಯದು. ಆದ್ದರಿಂದ ಕೆಲವೊಮ್ಮೆ ಆರ್ಥಿಕ ಸಮಾನತೆ ತರಲು ಹಿಂಸೆ ಅನಿವಾರ್ಯ ಎಂದು ಇದು ವಾದಿಸುತ್ತದೆ. ನಮ್ಮ ಸುತ್ತಲಿನ ಸಮಾಜವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಅದನ್ನು ಬದಲಾಯಿಸಲು ನಡೆದಿರುವ ಬಹುಪಾಲು ಸಾಂಘಿಕ ಹೋರಾಟಗಳಲ್ಲಿ ಈ ಸಿದ್ಧಾಂತದ್ದೇ ಸಿಂಹಪಾಲು. ಇದರರ್ಥ ಉದಾರ ಮಾನವತಾವಾದಿ ಸಿದ್ಧಾಂತ ಸಾಂಘಿಕ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿಲ್ಲ ಎಂದೇನಲ್ಲ. ಆದರೆ ಈ ಹೋರಾಟಗಳು, ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಒತ್ತಡ ಗುಂಪುಗಳಾಗಿ (preassure groups) ಕಾರ್ಯನಿರ್ವಹಿಸುತ್ತವೆ. ಇವುಗಳು ಮುಖ್ಯವಾಗಿ ರಾಷ್ಟ್ರಪ್ರಭುತ್ವವನ್ನು (Nation-state) ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತವೆ. ಇಲ್ಲಿ ಆರ್ಥಿಕ ಅಸಮಾನತೆ ಅಥವಾ ಇತರೆ ರೀತಿಯ ಅಸಮಾನತೆಗಳನ್ನು ನಿವಾರಿಸುವ ಕೆಲಸ ರಾಷ್ಟ್ರಪ್ರಭುತ್ವದ್ದು. ಮಹಿಳಾ ಚಳುವಳಿ ಯೂರೋಪಿನಲ್ಲಿ ಉಗಮವಾಗಿದ್ದೇ ಈ ಹಿನ್ನಲೆಯಲ್ಲಿ. ಪ್ರಜಾಪ್ರಭುತ್ವದಲ್ಲಿರುವ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕೆಂದು ರಾಷ್ಟ್ರಪ್ರಭುತ್ವವನ್ನು ಒತ್ತಾಯಿಸುವುದು ಈ ಚಳುವಳಿಯ ಮುಖ್ಯ ಗುರಿಯಾಗಿತ್ತು.
ಭಾರತದ ಸಂದರ್ಭದಲ್ಲೂ ನಾವು ಮೇಲಿನೆರಡೂ ರೀತಿಯ, ಸಮಾಜವನ್ನು ಗ್ರಹಿಸುವ ಅರ್ಥ ಮಾಡಿಕೊಂಡು ಅದನ್ನು ಬದಲಾಯಿಸುವ, ಸಾಂಘಿಕ ಪ್ರಯತ್ನಗಳನ್ನು ಕಾಣಬಹುದು. ಉದಾರವಾದಿ ಮಾನವತಾವಾದಿ ಸಿದ್ಧಾಂತವನ್ನು ಬಳಸಿ ರಾಷ್ಟ್ರಪ್ರಭುತ್ವವನ್ನು ಒತ್ತಾಯಿಸುವ ಚಳುವಳಿಗಳೂ ಇವೆ. ಇವುಗಳು ಆಧುನಿಕತೆಯ ತಾತ್ವಿಕತೆಯನ್ನೇ ಮುಂದುಮಾಡಿ, ಆಧುನಿಕ ರಾಷ್ಟ್ರಪ್ರಭುತ್ವಗಳ ಘೋಷಿತ ಉದ್ಧೇಶಗಳಾದ ಸ್ವಾತಂತ್ರ್ಯ, ಸಮಾನತೆ, ಭಾತೃತ್ವಗಳಿಗೆ ತಕ್ಕಂತೆ ಸರಿಯಾಗಿ ನಡೆದುಕೊಳ್ಳುವುದು ರಾಷ್ಟ್ರಪ್ರಭುತ್ವಗಳ ಕರ್ತವ್ಯ ಎಂದು ಹೇಳುತ್ತವೆ. ಹಾಗೆಯೇ ಮಾರ್ಕ್ಸ್‌ವಾದಿ ಸಿದ್ಧಾಂತದಿಂದ ಪ್ರೇರಿತವಾದ ಸಾಂಘಿಕ ಹೋರಾಟಗಳೂ ಭಾರತದಲ್ಲಿ ಕಾಣಬಹುದು. ಇವುಗಳು ಭಾರತದ ರಾಷ್ಟ್ರಪ್ರಭುತ್ವವನ್ನು ಬಂಡವಾಳಶಾಹಿ ಪ್ರಣೀತವೆಂದು ವಾದಿಸಿ, ಪ್ರೊಲೆಟೇರಿಯಟ್ (proletariat) ಪ್ರಭುತ್ವವನ್ನು ಸ್ಥಾಪಿಸಬೇಕೆಂದು ವಾದಿಸುತ್ತವೆ. ಆದರೆ ಇದು ಸಿದ್ಧಾಂತಗಳ ಕಥೆ. ಚಳುವಳಿಗಳನ್ನು ಪರಿಗಣಿಸಿದರೆ ಇವುಗಳ ನಡುವಿನ ವಿಭಿನ್ನ ಬೆರೆತಗಳ ತಾತ್ವಿಕತೆಯನ್ನು ನಾವು ಭಾರತದಲ್ಲಿ ಕಾಣಬಹುದು. ಉದಾಹರಣೆಗೆ, ಕರ್ನಾಟಕದ ದಲಿತ ಚಳುವಳಿಯನ್ನು ಗಮನಿಸಿದರೆ, ಅದರ ಘೋಷಿತ ತಾತ್ವಿಕತೆಯಲ್ಲಿ ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ, ಮಾರ್ಕ್ಸ್, ಪೆರಿಯಾರ್‌ರೆಲ್ಲರ ತತ್ವವೂ ಕಾಣುತ್ತದೆ. ಹಾಗೆಯೇ ಪ್ರಜಾಪ್ರಭುತ್ವದಲ್ಲಿನ ಬೂರ್ಜ್ವಾಪ್ರಭುತ್ವವನ್ನು (bourgeois state) ಒಪ್ಪಿ ಹೋರಾಟ ನಡೆಸುತ್ತಿರುವ ಮಾರ್ಕ್ಸ್‌ವಾದಿ ಪಕ್ಷಗಳು ಮತ್ತು ಚಳುವಳಿಗಳಿವೆ, ಬೂರ್ಜ್ವಾಪ್ರಭುತ್ವವನ್ನು ಧಿಕ್ಕರಿಸುವ ಮಾರ್ಕ್ಸ್‌ವಾದಿ ಚಳುವಳಿಗಳಿವೆ. ಆದರೆ ಈ ಎಲ್ಲಾ ಚಳುವಳಿಗಳೂ ಆಧುನಿಕವಾದ ಸಿದ್ಧಾಂತಗಳಿಂದಲೇ ಪ್ರೇರಣೆ ಪಡೆದು ನಡೆದಿರುವ ಸಾಂಘಿಕ ಪ್ರಯತ್ನಗಳು. ಇದರಲ್ಲಿ, ಗಾಂಧಿ ಮಾತ್ರ ಆಧುನಿಕತೆ ವಿರೋಧಿ ಸಿದ್ಧಾಂತವನ್ನು ರೂಪಿಸಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನವೂ ಕೂಡ ಆಧುನಿಕತೆಯ ಸಂದರ್ಭದಲ್ಲೇ, ಆಧುನಿಕತೆಯ ಆಯ್ದ ಅಂಶಗಳನ್ನು ಕೂಡಿಸಿದ ಮತ್ತು ಅದೇ ಕಾಲಕ್ಕೆ, ಸಂಪ್ರದಾಯವೆಂದು ಅವರು ಭಾವಿಸುವ ಅಂಶಗಳನ್ನು ಆಧುನಿಕತೆಯ ಮೌಲ್ಯಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸಿದ ಪ್ರಯತ್ನವೇ ಆಗಿದೆಯೇ ಹೊರತು ಆಧುನಿಕತೆ ವಿರೋಧಿ ಎಂದು ಭಾವಿಸಲು ಸಾಧ್ಯವಿಲ್ಲ.
ಆದರೆ, ಈಗ ಆಧುನಿಕತೆಯ ತಾತ್ವಿಕತೆ ಮತ್ತು ಆಧುನಿಕ ವಿಚಾರಗಳ ಮೂಲಭೂತ ತತ್ವಗಳನ್ನು (fundamental principles) ಆಧುನಿಕೋತ್ತರ ವಿಚಾರಧಾರೆ ಪ್ರಶ್ನೆ ಮಾಡುತ್ತಿರುವುದರಿಂದ ಒಂದು ರೀತಿಯ ಆತಂಕ ಕೆಲವರಿಗೆ ಪ್ರಾರಂಭವಾಗಿದೆ. ಉದಾಹರಣೆಗೆ ಹೇಳುವುದಾದರೆ ಫೂಕೋನ ವ್ಯಕ್ತಿತ್ವ ಪರಿಕಲ್ಪನೆಯನ್ನು ಮತ್ತು ಸ್ವ ಪರಿಕಲ್ಪನೆಯನ್ನು ತೆಗೆದುಕೊಳ್ಳಬಹುದು. ಆಧುನಿಕತೆ ವ್ಯಕ್ತಿಯನ್ನು ವೈಚಾರಿಕತೆಯಿಂದ ಕೂಡಿದ ಸಮಗ್ರ ವ್ಯಕ್ತಿತ್ವವಾಗಿ ಭಾವಿಸಿತು, ಮತ್ತು ತಮ್ಮ ನಿರ್ಧಾರಗಳನ್ನು ಅವರು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯ ಎಂದು ಭಾವಿಸಿತು. ಈ ಅವಕಾಶವನ್ನು ರಾಷ್ಟ್ರಪ್ರಭುತ್ವ ಪ್ರತಿಯೊಬ್ಬ ವ್ಯಕ್ತಿಗೂ (ಪ್ರಜೆ, ನಾಗರಿಕ) ನೀಡಬೇಕು, ಅವುಗಳನ್ನು ಹತ್ತಿಕ್ಕಬಾರದು ಎಂದಿತು. ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು ಹಾಗು ಮಾನವ ಹಕ್ಕುಗಳ ಪರಿಕಲ್ಪನೆ ಈ ನಿಟ್ಟಿನಲ್ಲೇ ಹುಟ್ಟಿರುವುದು. ನಮ್ಮ ಬಹುತೇಕ ಚಳುವಳಿಗಳು ಸಂವಿಧಾನದ ಈ ಹಕ್ಕುಗಳನ್ನು, ಹಾಗು ಅದರಲ್ಲೇ ದತ್ತವಾಗಿರುವ ಸಮಾನತೆಯ ಪರಿಕಲ್ಪನೆಯ ಹಿನ್ನಲೆಯಲ್ಲೇ ಹುಟ್ಟಿರುವುದು. ಈ ಹಕ್ಕು ಗಳು ಸರಿಯಾಗಿ ಜಾರಿಯಾಗಿಲ್ಲ, ಸರಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವುದು ಈ ಚಳುವಳಿಗಳ ಬಹಳ ಮುಖ್ಯ ಅಂಶವಾಗಿರುತ್ತದೆ. ಆದರೆ ಫೂಕೋನ ವ್ಯಕ್ತಿತ್ವದ ವ್ಯಾಖ್ಯಾನ ವ್ಯಕ್ತಿಯನ್ನು ಆಧರಿಸಿಲ್ಲ. ವ್ಯಕ್ತಿತ್ವ ಎನ್ನುವುದು ವಿಚಾರಧಾರೆ(discourse)ಯ ಸೃಷ್ಟಿ. ಯಾರು ಬೇಕಾದರು, ಯಾವುದೇ ವ್ಯಕ್ತಿತ್ವವನ್ನು ಧಾರಣೆ ಮಾಡಬಹುದು. ನಮ್ಮ ಸ್ವ ಎನ್ನುವುದನ್ನು ವಿಚಾರಧಾರೆಗಳು ಸೃಷ್ಟಿಸಿರುವುದರಿಂದ ಅದು ಸಮಗ್ರವಾದದ್ದಲ್ಲ, ಏಕತ್ರವಾದದ್ದಲ್ಲ, ಛಿದ್ರವಾದದ್ದು. ನಮ್ಮ ಸ್ವತಂತ್ರ ವಿಚಾರಗಳು ಎಂದು ನಾವು ಭಾವಿಸಿರುವುದು, ಚಾರಿತ್ರಿಕ ಸಂದರ್ಭದಲ್ಲಿ (ಫೂಕೋ genealogyಎಂಬ ಪದವನ್ನು ಬಳಸುತ್ತಾನೆ, ಚಾರಿತ್ರಿಕಕ್ಕೂ ಈ ಪರಿಕಲ್ಪನೆಗೂ ವ್ಯತ್ಯಾಸವನ್ನು ಅತ ಪರಿಕಲ್ಪಿಸಿಕೊಳ್ಳುತ್ತಾನೆ, ಆದರೂ ಇಲ್ಲಿ ಅರ್ಥ ಸಂವಹನಕ್ಕಾಗಿ ತಪ್ಪಾದರೂ ಪರಿಚಿತ ಪರಿಕಲ್ಪನೆಯನ್ನೇ ನಾನು ಬಳಸಿದ್ದೇನೆ)ರೂಪುಗೊಂಡು ನಮಗೆ ದತ್ತವಾಗಿರುವಂಥದ್ದೂ ಎಂಬುದು ಆತನ ವಾದ. ವ್ಯಕ್ತಿಯ ವೈಚಾರಿಕತೆಯನ್ನೇ ಇದು ಪ್ರಶ್ನಿಸುತ್ತದೆ. ನಮ್ಮ ವ್ಯಕ್ತಿತ್ವಗಳ ರೂಪುಗೊಳ್ಳುವಿಕೆಯಲ್ಲಿ ವ್ಯಕ್ತಿಗಳ ಪಾತ್ರ ಏನೂ ಇಲ್ಲ ಎಂಬುದು, ವ್ಯಕ್ತಿಗಳು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಂಡು, ಬದಲಾಯಿಸಲು ಸಾಧ್ಯ ಎಂಬ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ವೈಚಾರಿಕತೆಯನ್ನೇ ಆತ ಎನ್‌ಲೈಟನ್‌ಮೆಂಟ್‌ನ (enlightenment) ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಇದು ಅವೈಚಾರಿಕ ಎಂದು ಕೆಲವು ರೀತಿಯ eನ ಪರಂಪರೆಗಳನ್ನು ಪಕ್ಕಕ್ಕೆ ದೂಡಿದೆ ಎಂಬುದು ಆಥನ ವಾದ. ವೈಚಾರಿಕತೆ ಎನ್ನುವ ಆಕೃತಿಯೇ ಚಾರಿತ್ರಿಕ ಸನ್ನಿವೇಶದಲ್ಲಿ ಆಧುನಿಕತೆಯನ್ನು ಸಮರ್ಥಿಸುವ ವಿಚಾರಧಾರೆಯ ಪರಿಣಾಮ ಎನ್ನುವುದು ಆತನ ವಾದ. ಇದು ವ್ಯಕ್ತಿಯನ್ನೇ ನಿರ್ವಚಿಸುವುದರಿಂದ, ವ್ಯಕ್ತಿ ಎನ್ನುವುದು ಸತ್ತಂತಾಗುತ್ತದೆ. ಆತನ ಬಹುಪಾಲು ಸಂಶೋಧನೆಗಳು ವಿಚಾರಧಾರೆಗಳು ಹೇಗೆ ಯಾವ ಯಾವ ವಿಧಾನಗಳಿಂದ ನಮ್ಮ ಸ್ವ (self)ವನ್ನು ರೂಪಿಸಿದೆ ಎನ್ನುವುದಕ್ಕೆ ಸೀಮಿತವಾಗಿದೆ (technologies of production of self). ಆತ ನೀಷೆಯ Nietzsche) god is dead ಎಂಬುದನ್ನು man is dead ಎಂದು ವಿಸ್ತರಿಸಿದ. ಇದೇ ಹಿನ್ನಲೆಯಲ್ಲೇ ಆತ ಲೇಖಕ (author-ಕರ್ತೃ) ಪರಿಕಲ್ಪನೆಯನ್ನೇ ನಿರಾಕರಿಸುತ್ತಾನೆ. ವ್ಯಕ್ತಿ ಎಂಬುದೇ ಸ್ವತಂತ್ರವಲ್ಲ ಎಂದಾದ ಮೇಲೆ, ವ್ಯಕ್ತಿ ಸಮಾಜವನ್ನು ಅರ್ಥ ಮಾಡಿಕೊಳ್ಳುವ, ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೊಸ ಸಿದ್ಧಾಂತಗಳ ಈ ನಿಲುವೇ ಪ್ರಸ್ತುತ ಆತಂಕಕ್ಕೇ ಎಡೆ ಮಾಡಿಕೊಟ್ಟಿರುವುದು.
ಇದನ್ನು ಉದಾಹರಣೆಯೊಂದಿಗೆ ವಿವರಿಸಿದರೆ ಸ್ಪಷ್ಟವಾಗಬಹುದು. ಬ್ರಾಹ್ಮಣಶಾಹಿ ಹೇಗೆ ಪ್ರತಿಭೆ ಎನ್ನುವ ಪರಿಕಲ್ಪನೆಯನ್ನು ರೂಪಿಸಿದೆ, ಅದನ್ನು ಒಂದು ಜಾತಿಯೊಂದಿಗೆ ಸಮೀಕರಿಸಿ ನಮ್ಮೆಲ್ಲರನ್ನೂ ಒಪ್ಪಿಕೊಳ್ಳುವಂತೆ ಮಾಡಿದೆ ಎನ್ನುವುದನ್ನು ವಿಶ್ಲೇಷಿಸುವುದು ಫೂಕೋನ ಸಿದ್ಧಾಂತದಿಂದ ಸಾಧ್ಯ. ಹೇಗೆ ಇದು ಬ್ರಾಹ್ಮಣಶಾಹಿಯ ಅಧಿಕಾರವನ್ನು ಮುಂದುವರೆಸುವಂತಹ ಸತ್ಯವಾಗಿ, ತಿಳುವಳಿಕೆ ರೂಪುಗೊಂಡಿದೆ ಎನ್ನುವುದನ್ನು ವಿವರಿಸಲು ಸಾಧ್ಯ. ಈ ಮುಖ ನಮ್ಮ ಪ್ರಮುಖ ಚಳುವಳಿಗಳಿಗೆ ಆತಂಕಕಾರಿಯೇನಲ್ಲ, ಬದಲಾಗಿ ಪೂರಕವಾಗಿ ಕೆಲಸ ಮಾಡುತ್ತದೆ. ಇದರ ಇನ್ನೊಂದು ಮುಖವೂ ಇದೆ. ಇದೇ ಉದಾಹರಣೆಯನ್ನು ವಿಸ್ತರಿಸಿದರೆ ಅದು ಸ್ಪಷ್ಟವಾಗುತ್ತದೆ. ದಲಿತ ಚಳುವಳಿ ದಲಿತ ಸ್ವ ಎನ್ನುವುದು ಇದೆ. ಅದು ಶತಶತಮಾನಗಳಿಂದ ಶೋಷಣೆಗೊಳ್ಳುತ್ತಾ ಬಂದಿದೆ. ಈಗ ಅದು ಎಚ್ಚರಗೊಂಡಿದೆ. ತನ್ನ ಅನುಭವಗಳ ಹಿನ್ನಲೆಯಲ್ಲಿ ತನ್ನ ಮಾತನ್ನು ಕೇಳು ಎನ್ನುತ್ತಿದೆ ಎನ್ನುವುದನ್ನೂ ಒಂದು ವಿಚಾರಧಾರೆಯ ಪರಿಣಾಮವಾಗಿ ರೂಪುಗೊಂಡಿದ್ದು, ದಲಿತ ಸ್ವ ಎನ್ನುವುದು ಇಲ್ಲ, ಸ್ವ ಎನ್ನುವುದು ಸಮಗ್ರವಾದದ್ದಲ್ಲ, ಛಿದ್ರವಾದದ್ದು ಎಂದು ಫೂಕೋನ ವಿಚಾರಗಳ ಹಿನ್ನಲೆಯಲ್ಲಿ ನಿರೂಪಿಸಲು ಸಾಧ್ಯ. ಈ ಮುಖವೇ ಪ್ರಗತಿಪರ ಎಂದು ಕರೆಸಿಕೊಳ್ಳುವ ಚಳುವಳಿಗಳಿಗೆ ಆತಂಕಕಾರಿಯಾದದ್ದು. ಪ್ರಸ್ತುತ ಆಧುನಿಕತೆಯ ವೈಚಾರಿಕತೆಯ ಹಿನ್ನಲೆಯಲ್ಲಿ ತಮ್ಮ ಚಳುವಳಿಗಳನ್ನು ನಿರ್ವಹಿಸುತ್ತಿರುವವರಿಗೆ, ವೈಚಾರಿಕತೆ ಎನ್ನುವುದೇ ಇಲ್ಲ ಎಂದಾಗ, ಆಧುನಿಕತೆ ಸರಿಯಲ್ಲ ಎಂದಾಗ ಯಾವ ಆತಂಕ ಉಂಟಾಗಬಹುದು ಅದೇ ಈಗ ಆಗಿರುವುದು.
ಮತ್ತೊಬ್ಬ ಸಮಕಾಲೀನ ಪ್ರಮುಖ ಸಿದ್ಧಾಂತಿಯಾದ ಡೆರಿಡಾನ ವಿಚಾರಗಳನ್ನು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳಬಹುದು. ಡೆರಿಡಾ ಭಾಷೆಯನ್ನು ವಿಚಾರದ/ಅರ್ಥದ ವಾಹಕ ಎಂದು ನೋಡುವುದಿಲ್ಲ. ಬದಲಾಗಿ ನಮ್ಮ ವಾಸ್ತವವನ್ನು ರೂಪಿಸುವ ಪರಿಕರವಾಗಿ ನೋಡುತ್ತಾನೆ. ವಾಸ್ತವವೆನ್ನುವುದನ್ನು ನಾವು ತಿಳಿಯಲೇ ಸಾಧ್ಯವಿಲ್ಲ, ನಮ್ಮ ಭಾಷೆ ಏನನ್ನು ನಮಗೆ ತಿಳಿಸುತ್ತದೋ ಅದೇ ವಾಸ್ತವ ಎಂದು ನಾವು ಭಾವಿಸುತ್ತೇವೆ. ಭಾಷೆ ಒಂದು ಆಟ, ಅದು ನಿರ್ದಿಷ್ಟವಾದುದಲ್ಲವಾದ್ದರಿಂದ ಅದನ್ನು ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿ ವಾಸ್ತವವನ್ನು ಬದಲಾಯಿಸಲು ಸಾಧ್ಯ ಎಂದು ಆತ ವಾದಿಸುತ್ತಾನೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳುವ, ಅದನ್ನು ಬದಲಾಯಿಸುವ ಕ್ರಿಯೆಯನ್ನು ಭಾಷೆಯ ಮಟ್ಟಕ್ಕೆ, ಆಟದ ಮಟ್ಟಕ್ಕೆ ಇಳಿಸಿದರೆ ಹೇಗೆ ಎನ್ನುವ ಆತಂಕ ಸಹಜವಾಗೇ ಇದರಿಂದ ಮೂಡುತ್ತದೆ. ವಾಸ್ತವವೆನ್ನುವುದನ್ನು ತಿಳಿಯಲು ಸಾಧ್ಯವಿಲ್ಲ ಎನ್ನುವುದು, ಶೋಷಣೆ ಇದೆ ಅದನ್ನು ಹೋಗಲಾಡಿಸಬೇಕು ಎನ್ನುವವರಿಗೆ ಆತಂಕಕಾರಿಯಾಗುತ್ತದೆ. ಡೆರಿಡಾನ ಸಿದ್ಧಾಂತವನ್ನು ಕೂಡ ಹೇಗೆ ಶೋಷಿತರನ್ನು ಶೋಷಿತ ವ್ಯವಸ್ಥೆಯ ಪರವಾಗಿರುವಂತೆ, ಅದನ್ನು ನಮ್ಮದು ಎನ್ನುವಂತೆ ನೋಡಲು, ಅರ್ಥಮಾಡಿಕೊಳ್ಳಲು ಭಾಷೆಯ ಮೂಲಕ ಸೃಷ್ಟಿಸಲಾಗಿದೆ ಎಂದು ಪ್ರಸ್ತುತದ ಯಾಜಮಾನ್ಯ ವ್ಯವಸ್ಥೆಯನ್ನು ವಿಶ್ಲೇಷಿಸಲು ಬಳಸಿಕೊಳ್ಳಲು ಸಾಧ್ಯ. ಹಾಗಾದಾಗ ಅದು ಆತಂಕ ಮೂಡಿಸುವ ಬದಲು, ಪ್ರಸ್ತುತದ ಪ್ರಗತಿಪರ ಚಳುವಳಿಗೆ ಪೂರಕವಾದ ಸಿದ್ಧಾಂತವಾಗುತ್ತದೆ.
ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ, ಈ ಹೊಸ ಸಿದ್ಧಾಂತಗಳು ಕತ್ತಿಯಂತೆಯೂ, ಅದನ್ನು ಕಾಯಿ ಕತ್ತರಿಸಲು ಇಲ್ಲಾ ಬೇರೊಬ್ಬರನ್ನು ಕತ್ತರಿಸಲು ಬಳಸಿಕೊಳ್ಳಲು ಸಾಧ್ಯ ಎಂದು ನಾನು ಹೇಳುತ್ತಿಲ್ಲ. ಇಲ್ಲಿಯೇ ನಾನು ಮೊದಲಿಗೆ ಪ್ರಸ್ತಾಪಿಸಿದ ಆಧುನಿಕೋತ್ತರ ಮತ್ತು ಸಂರಚನೋತ್ತರ ಸಿದ್ಧಾಂತಗಳ ನಡುವಿನ ವ್ಯತ್ಯಾಸ ಮುಖ್ಯವಾಗುವುದು. ಇವುಗಳನ್ನು ಸಾಮಾನ್ಯವಾಗಿ interchangableಆಗಿ ಬಳಸಲಾಗುತ್ತದೆ. ಆದರೆ ನಾನು ಮೇಲೆ ಉದಾಹರಿಸಿದ ಫೂಕೋನ ಸಿದ್ಧಾಂತಗಳು ಮತ್ತು ಡೆರಿಡಾನ ಸಿದ್ಧಾಂತಗಳನ್ನು ನಾನು ಸಂರಚನೋತ್ತರ ಸಿದ್ಧಾಂತಗಳನ್ನಾಗಿ ನೋಡುತ್ತೇನೆ. ಆಧುನಿಕೋತ್ತರ ಸಿದ್ಧಾಂತಗಳ ಭಾಗವೇ ಆದರೂ ಅವುಗಳನ್ನು ಬೇರೆಯಾಗಿ ನೋಡಬೇಕೆಂಬುದು ನನ್ನ ವಾದ. ಫೂಕೋ ಆಧುನಿಕತೆಯ ಸಂದರ್ಭದ ತಿಳುವಳಿಕೆ ಮತ್ತು ಅಧಿಕಾರದ ಸಂಬಂಧಗಳನ್ನು ವಿಶ್ಲೇಷಣೆ ಮಾಡಿದ್ದಾನೆ, ಅವುಗಳು ಹೇಗೆ ವ್ಯಕ್ತಿ ಎಂಬ ಪರಿಕಲ್ಪನೆಯನ್ನು ಆಧುನಿಕತೆಯ ಸಂದರ್ಭದಲ್ಲಿ ಸೃಷ್ಟಿಸಿವೆ, ಅದಕ್ಕೂ ಆ ಕಾಲದ ಪ್ರಬಲ ವಿಚಾರಧಾರೆಗೂ ಇರುವ ಸಂಬಂಧ ಏನು ಎನ್ನುವುದನ್ನು ವಿಶ್ಲೇಷಿದ್ದಾನೆ. ಇದನ್ನು ವಿಸ್ತರಿಸಿ ಆಧುನಿಕತೆ ವಿರೋಧಿಸುವ ಸಿದ್ಧಾಂತಗಳು ರೂಪುಗೊಂಡಿವೆ. ಆಧುನಿಕತೆಯ ಸಂದರ್ಭವನ್ನು ಮಾತ್ರ ಫೂಕೋ ವಿಶ್ಲೇಷಿಸಿದ್ದರೂ ಪ್ರಸ್ತುತದ ಪರಿಕಲ್ಪನೆಯ ಜೀನಿಯಾಲಜಿಗಳನ್ನು ಟ್ರೇಸ್ ಮಾಡುವಾಗ ಆತ ಆಧುನಿಕ ಪೂರ್ವ ಸಂದರ್ಭದಲ್ಲಿ ಅಡ್ಡಾಡುತ್ತಾನೆ. ಆಧುನಿಕ ಪೂರ್ವದಲ್ಲಿದ್ದ ಪ್ರಬಲ ವಿಚಾರಧಾರೆ, ಸೃಷ್ಟಿಸಿದ ರೂಪಿಸಿದ ಪರಿಕಲ್ಪನೆಗಳನ್ನು ಮತ್ತು ವ್ಯಕ್ತಿತ್ವಗಳನ್ನೇನೂ ಆತ ಒಳ್ಳೆಯದು ಎಂದು ಹೇಳುವುದಿಲ್ಲ. ಆತನ ಸೈದ್ಧಾಂತಿಕ ವಿಚಾರಗಳನ್ನು ನಾವು ಆಧುನಿಕ ವಿಚಾರಧಾರೆ, ಆಧುನಿಕಪೂರ್ವ ವಿಚಾರಧಾರೆ ಮತ್ತು ಆಧುನಿಕೋತ್ತರ ವಿಚಾರಧಾರೆಗೂ ಅನ್ವಯಿಸಿ ವಿಶ್ಲೇಷಿಸಿ ಅವುಗಳು ರೂಪಿಸುತ್ತಿರುವ ವ್ಯಕ್ತಿತ್ವ, ಸ್ವ ತಿಳುವಳಿಕೆಗೂ ಅಧಿಕಾರಕ್ಕೂ ಇರುವ ಸಂಬಂಧವನ್ನು ತೋರಿಸಬಹುದು. ಆ ಅಧಿಕಾರ ಸಂಬಂಧಗಳನ್ನು ಬದಲಾಯಿಸಿ, ಬೇರೆ ರೀತಿಯ ಸಂಬಂಧಗಳನ್ನು ಸೃಷ್ಟಿಸಲು ಅಗತ್ಯವಿರುವ ತಿಳುವಳಿಕೆಯ ಉತ್ಪಾದನೆ ಮತ್ತು ವಿಚಾರಧಾರೆಯ ಪ್ರಸರಣವನ್ನು ತೀವ್ರಗೊಳಿಸಬಹುದು. ಹೀಗೆ ಸಂರಚನೋತ್ತರ ಸಿದ್ಧಾಂತಗಳನ್ನು ಕೇವಲ ಆಧುನಿಕೋತ್ತರ ವಿಚಾರಧಾರೆಯ ಭಾಗವಾಗಿ ನೋಡದೆ, ಆಧುನಿಕೋತ್ತರ ಅಧಿಕಾರ ಸಂಬಂಧಗಳನ್ನು ಅನಾವರಣಗೊಳಿಸಲು ಬಳಸಬಹುದು. ಆದ್ದರಿಂದ ಸಂರಚನೋತ್ತರ ಸಿದ್ಧಾಂತಗಳನ್ನು ಪ್ರಸ್ತುತ ಸಂದರ್ಭದಲ್ಲಿ ಆಧುನಿಕೋತ್ತರ ರಚನೆಗಳನ್ನು ಒಡೆಯಲು, ಬದಲಾಯಿಸಲು ಸಾಧ್ಯವಿದೆ ಎನ್ನುವುದು ನನ್ನ ವಾದ.
ಈಗ ಆಧುನಿಕೋತ್ತರ ಸಿದ್ಧಾಂತ ಅಥವಾ ವಿಚಾರಧಾರೆ ಎಂದರೆ ಏನು ಎಂದು ನೋಡೋಣ. ಮೊದಲಿಗೆ ಆಧುನಿಕೋತ್ತರ ವಿಚಾರಧಾರೆ (ಪೋಸ್ಟ್-ಮಾಡರ್ನ್ ) ಮತ್ತು ಆಧುನಿಕೋತ್ತರವಾದ (postmodernism) ಇವುಗಳನ್ನು ಅರ್ಥ ಮಾಡಿಕೊಳ್ಳೋಣ. ಆಧುನಿಕೋತ್ತರವಾದ ಎನ್ನುವುದು, ನಾವು ನವ್ಯ ಎಂದು ಗುರುತಿಸುವ ಮಾಡರ್ನಿಸಂ ನಂತರದ ಬೆಳವಣಿಗೆ. ಮುಖ್ಯವಾಗಿ ಕಲೆ, ಸಾಹಿತ್ಯ ಇತ್ಯಾದಿ ಪ್ರಕಾರಗಳಲ್ಲಿ ಬೆಳೆದ ಒಂದು ಹೊಸ ವಾದ. ಮಾಡರ್ನಿಸಂಗೆ ವಿರುದ್ಧವಾದ, ಅಥವಾ ವಿರುದ್ಧ ಎನ್ನುವುದಕ್ಕಿಂತ ಭಿನ್ನವಾದ ಚಿಂತನೆಗಳು ಇವು. ನಾವು ಮಾಡರ್ನಿಸಂ ಬಗ್ಗೆ ತಲೆಕೆಡಿಸಿಕೊಳ್ಳದಂತೆ, ಪೋಸ್ಟ್‌ಮಾಡರ್ನಿಸಂ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಈ ಸಂದರ್ಭದಲ್ಲಿ. ನಾವು ಮುಖ್ಯವಾಗಿ ಯೋಚಿಸಬೇಕಾಗಿರುವುದು ಪೋಸ್ಟ್‌ಮಾಡರ್ನ್ ಡಿಸ್ಕೋರ್ಸ್ (ವಿಚಾರಧಾರೆ) ಕುರಿತು. ಇವುಗಳನ್ನು ಸ್ಥೂಲವಾಗಿ ಆಧುನಿಕೋತ್ತರ ಸಂದರ್ಭದ ವಿಚಾರಗಳು ಎನ್ನಬಹುದು. ಇದು ಆಧುನಿಕೋತ್ತರ ಸಂದರ್ಭ ಎಂದರೆ ಏನು? ಎಂಬ ಪ್ರಶ್ನೆಯನ್ನು ಮುಂದುಮಾಡುತ್ತವೆ. ಆಧುನಿಕತೆ ಎಂಬ ಪರಿಕಲ್ಪನೆಯನ್ನು ಬಳಸುವಂತೆ, ಇದನ್ನು ಆಧುನಿಕೋತ್ತರತೆ (postmodernity) ಅಥವಾ ಅತ್ಯಾಧುನಿಕತೆ ಎಂದು ಕರೆಯಬಹುದೇನೊ. ಪೋಸ್ಟ್‌ಮಾಡರ್ನಿಟಿ ಬಹಳ ಮುಖ್ಯವಾಗಿ ನಾವು ತಲೆಕೆಡಿಸಿಕೊಳ್ಳಬೇಕಾಗಿರುವುದು. ಇದೇ ಇಂದಿನ ನಮ್ಮ ಸಮಕಾಲೀನ ಸಂದರ್ಭದ ಅನೇಕ ತಲ್ಲಣಗಳಿಗೆ ಕಾರಣವಾಗಿರುವುದು, ಸಂರಚೋನತ್ತರ ಸಿದ್ಧಾಂತ ಅಥವಾ ಆಧುನಿಕೋತ್ತರವಾದ ಅಲ್ಲ.
ಆಧುನಿಕೋತ್ತರತೆ ಎನ್ನುವುದನ್ನು ನಾವು ಫ್ರೆಡರಿಕ್ ಜೇಮ್‌ಸನ್ ಎಂಬ ವಿದ್ವಾಂಸ ಗುರುತಿಸುವಂತೆ ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ನನ್ನ ವಾದ. ಆತ ಅದನ್ನು ಲೇಟ್ ಲಾಜಿಕ್ ಆಫ್ ಕ್ಯಾಪಿಟಲಿಸಂ (Late Logic of Capitalism) ಎಂದು ವಿಶ್ಲೇಷಿಸುತ್ತಾನೆ. ಅಂದರೆ, ಬಂಡವಾಳಶಾಹಿಯ ಕೊನೆ ಬೆಳವಣಿಗೆಯ ತರ್ಕ ಎಂದು. ಇದನ್ನು ನಾವು ಸ್ಥೂಲವಾಗಿ ಹೀಗೆ ಅರ್ಥ ಮಾಡಿಕೊಳ್ಳಬಹುದು. ಆಧುನಿಕತೆಯು ಬಂಡವಾಳಶಾಹಿಯ ಉಗಮದ ಸಂದರ್ಭದಲ್ಲಿನ ಚಿಂತನೆಗಳು ಎಂದು ಹಿಂದೆ ಹೇಳಿದಂತೆ, ಬಂಡವಾಳಶಾಹಿ ಬೆಳೆದು ನಿಂತ ಸ್ಥಿತಿಯ ಸಂದರ್ಭವೇ, ಅತ್ಯಾಧುನಿಕತೆ. ಆಧುನಿಕತೆ, ವ್ಯಕ್ತಿ ವಿಶಿಷ್ಟವಾದವನ್ನು ಸಮರ್ಥಿಸಿದರೂ ಜೊತೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಎಂಬ ಪರಿಕಲ್ಪನೆಗಳನ್ನು ನೀಡಿತು. ಅಲ್ಲದೆ, ವ್ಯಕ್ತಿಯನ್ನು ರಾಷ್ಟ್ರಪ್ರಭುತ್ವ ಎಂಬ ಸಮಷ್ಟಿ ಪರಿಕಲ್ಪನೆಯಲ್ಲಿ ಕಟ್ಟಿ ಹಾಕಿತು. ವಸಾಹತುಶಾಹಿಯು ಬೆಳವಣಿಗೆಯ ಭಾಗವಾಗಿ ರೂಪುಗೊಂಡರು, ಕಾಲಾಂತರದಲ್ಲಿ ಆಧುನಿಕ ವಿಚಾರಗಳನ್ನು ತಲೆಗೆ ಹಚ್ಚಿಕೊಂಡ, ವಸಾಹತು ಪ್ರದೇಶಗಳ ಜನರು, ವಸಾಹತುಶಾಹಿಯನ್ನು ವಿರೋಧಿಸಿ ತಮ್ಮದೇ ಆದ ರಾಷ್ಟ್ರಪ್ರಭುತ್ವಗಳನ್ನು ಸೃಷ್ಟಿಸಿಕೊಂಡರು. ಈ ರಾಷ್ಟ್ರದ ಗಡಿಗಳು ಬಂಡವಾಳದ ಸುಗಮ ಚಲನೆಗೆ ಅಡ್ಡಿಯಾಗಿದ್ದವು. ನಮ್ಮ ದೇಶದ ಉದಾಹರಣೆ ನೀಡುವುದಾದರೆ, ವಿದೇಶಿ ಬಂಡವಾಳ ನಮ್ಮ ರಾಷ್ಟ್ರದಲ್ಲಿ ಬರುವುದು ಅಷ್ಟು ಸುಲಭವಾಗಿರಲಿಲ್ಲ, ಬಂದರೂ ಅದರ ಪಾಲು ಶೇ. ೪೯ಕ್ಕಿಂತ ಹೆಚ್ಚಿರಬಾರದೆಂದು ಕಂಡಿಶನ್ ಇತ್ತು. ಲೈಸನ್ಸ್ ಪಡೆಯುವುದು, ಪರ್‍ಮಿಶನ್ ಪಡೆಯುವುದು ಅಷ್ಟೇನೂ ಸುಲಭದ ಸಂಗತಿಯಾಗಿರಲಿಲ್ಲ. ಬಂಡವಾಳಶಾಹಿಯ ಸುಗಮ ಚಲನೆಗೆ ರಾಷ್ಟ್ರಪ್ರಭುತ್ವಗಳು ತಡೆಗೋಡೆಗಳಾಗಿದ್ದವು. ಇದು ಆಧುನಿಕತೆಯ ಕಥೆ. ಆದರೆ ಇಂದು ಸಂಗತಿ ಇದಲ್ಲ. ಬಂಡವಾಳಶಾಹಿ ರಾಷ್ಟ್ರದ ಗಡಿಗಳನ್ನು ಮೀರಿ ಸಂಚರಿಸತೊಡಗಿದೆ. ನಮ್ಮ ರಾಷ್ಟ್ರದ್ದೇ ಕಥೆ ಹೇಳುವುದಾದರೆ, ಲೈಸನ್ಸ್ ರಾಜ್, ಪರ್‍ಮಿಟ್ ರಾಜ್‌ಗಳು ಹೊರಟು ಹೋಗಿದೆ. ವಿದೇಶಿ ಬಂಡವಾಳ ಶೇ. ೪೯ಕ್ಕಿಂತ ಹೆಚ್ಚಿರಬಾರದು ಎಂಬುದು ಹೋಗಿ ಎಷ್ಟಾದರೂ ಇರಬಹುದು ಎಂದಾಗಿದೆ. ಅದು ಹೋಗಲಿ, ರಾಷ್ಟ್ರಪ್ರಭುತ್ವ ನಡೆಸುತ್ತಿದ್ದ ಎಷ್ಟೋ ಇಂಡಸ್ಟ್ರಿಗಳನ್ನು ವ್ಯವಸ್ಥಿತವಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲಾಗುತ್ತಿದೆ. ಬಂಡವಾಳಶಾಹಿಯು ಇಂದು ಒಂದು ರಾಷ್ಟ್ರದ ಹೆಸರಿನಲ್ಲಿ ಅಡಿಯಲ್ಲಿ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ. ಎಲ್ಲವೂ ಮಲ್ಟಿನ್ಯಾಷನಲ್ ಅಥವಾ ಟ್ರಾನ್ಸ್‌ನ್ಯಾಷನಲ್ (multi-national, transnational). ಹೊಸ ರೀತಿಯ ತಂತ್ರeನವೂ ಕೂಡ ಇದಕ್ಕೆ ಸರಿಸಮಾನವಾಗಿ ಬೆಳೆದಿದೆ. ಮಾಹಿತಿ ತಂತ್ರeನದ ಬೆಳವಣಿಗೆ (ಅಂತರ್ಜಾಲ, ಇಂಟರ್‌ನೆಟ್) ಇತ್ಯಾದಿ ಬಂಡವಾಳದ ಸುಗಮ ಚಲನೆಗೆ ಕಾರಣಕರ್ತವಾಗಿದೆ. ಸ್ವಿಟ್ಜರ್‌ಲ್ಯಾಂಡ್‌ನ ಬ್ಯಾಂಕ್‌ನ ಪ್ರತಿನಿತ್ಯದ ವ್ಯವಹಾರದ ಲೆಕ್ಕ ಪತ್ರಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಎಲ್ಲವೂ ಕ್ರೆಡಿಟ್‌ಕಾರ್ಡ್ ಮತ್ತು ಕಂಪ್ಯೂಟರ್ ಮೂಲಕ ನಡೆಯುವುದರಿಂದ ಅಂದಂದಿನ ಲೆಕ್ಕಗಳನ್ನು ಬೆಂಗಳೂರಿನ ಬಿ.ಕಾಂ. ಮಾಡಿದ ತರುಣ/ತರುಣಿಯರು ಬೆಂಗಳೂರಿನಲ್ಲಿ ಕುಳಿತು ನಿರ್ವಹಿಸುತ್ತಾರೆ. ಏಕೆ? ಇಲ್ಲಿ ಅವರಿಗೆ ಸಂಬಳ ಕಡಿಮೆ ಕೊಡಬಹುದು, ಅಲ್ಲಾದರೆ, ಜಾಸ್ತಿ ಕೊಡಬೇಕಾಗುತ್ತದೆ! ಅಷ್ಟೇ! ಇದು ಬಂಡವಾಳಶಾಹಿಯ ಹೊಸ ಕಾರ್ಯನಿರ್ವಹಣೆ.
ಇದು ಆಧುನಿಕೋತ್ತರತೆ ಅಥವಾ ಆಧುನಿಕೋತ್ತರ ಸಂದರ್ಭ. ಈ ಸಂದರ್ಭದ ಹೊಸ ವಿಚಾರಗಳೇ ಆಧುನಿಕೋತ್ತರ ವಿಚಾರಧಾರೆ. ಇವುಗಳನ್ನು ಇಲ್ಲಿ ಸ್ಥೂಲವಾಗಿ ಗಮನಿಸಿ, ಅವುಗಳು ನಮ್ಮ ಸಮಕಾಲೀನ ಸಂದರ್ಭವನ್ನು ರೂಪಿಸುತ್ತಿರುವ ರೀತಿಯನ್ನು ಅರಿತರೆ, ನಮ್ಮ ತಲ್ಲಣಗಳ ಮೂಲವನ್ನು ಮತ್ತು ಸ್ವರೂಪವನ್ನು ಅರಿಯಲು ಸಾಧ್ಯವಾಗುತ್ತದೆ.
ಆಧುನಿಕೋತ್ತರ ಸಂದರ್ಭದ ಪ್ರಮುಖ ಪ್ರಕ್ರಿಯೆಯಾದ ಜಾಗತೀಕರಣವನ್ನು ಕುರಿತು ಸಾಮಾನ್ಯವಾಗಿ, ನಮ್ಮ ಸ್ಥಳೀಯ ಸಂಸ್ಕೃತಿ, ಗುರುತುಗಳನ್ನು ಅಳಿಸಿ ಹಾಕಿ ಎಲ್ಲವನ್ನೂ ಒಂದೇ ಮಾಡಿಬಿಡುತ್ತದೆ, ಎಲ್ಲವೂ ಅಮೆರಿಕನ್‌ಮಯವಾಗುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಎಲ್ಲರನ್ನೂ ಜಾಗತಿಕ ಮಾರುಕಟ್ಟೆಯೊಂದಿಗೆ ಜೋಡಿಸುವ, ಎಲ್ಲರನ್ನೂ ಬಹುರಾಷ್ಟ್ರೀಯ ಕಂಪನಿಗಳ ಗ್ರಾಹಕರನ್ನಾಗಿ ಮಾಡಿಬಿಡುವ ಭೂತ ಜಾಗತೀಕರಣ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ, ಇಂದು ಪ್ರಪಂಚದಾದ್ಯಂತ ಸಂಸ್ಕೃತಿ ಆಧಾರಿತ ಹೋರಾಟಗಳನ್ನು, ಬೃಹತ್ ಅದುದನ್ನು ಒಡೆದು, ಸಣ್ಣ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಿಕೊಳ್ಳುವ ಚಳುವಳಿಗಳನ್ನು ನಾವು ಗಮನಿಸಬಹುದು. ಇವುಗಳನ್ನು ಕೆಲವು ರಾಜಕೀಯಶಾಸ್ತ್ರಜ್ಞರು ಜಾಗತೀಕರಣಕ್ಕೆ ಪ್ರತಿಯಾಗಿ ಹುಟ್ಟುತ್ತಿರುವ ಚಳುವಳಿಗಳಾಗಿ ನೋಡುತ್ತಾರೆ. ಇವರ ಪ್ರಕಾರ ಈ ವಿಭಿನ್ನ ಚಳುವಳಿಗಳನ್ನು ಸಂಘಟಿಸಿ, ಜಾಗತೀಕರಣದ ವಿರುದ್ಧ ಹೋರಾಡಲು ಬಳಸಲು ಸಾಧ್ಯ. ಇದರ ಸಾಧ್ಯ ಅಸಾಧ್ಯತೆಗಳನ್ನು ಕುರಿತು ನಂತರ ಗಮನಿಸಬಹುದು. ಇಲ್ಲಿ ನಾನು ಜಾಗತೀಕರಣ ಮತ್ತು ಈ ವಿಭಿನ್ನ ಛಿದ್ರವಾದ ಸಂಸ್ಕೃತಿ ಆಧಾರಿತ ಚಳುವಳಿಗಳನ್ನು ಮತ್ತೊಂದು ರೀತಿಯಲ್ಲಿ ಪರಿಭಾವಿಸಿರುವ ರೀತಿಯನ್ನು ಪ್ರಸ್ತಾಪಿಸಲು ಬಳಸುತ್ತೇನೆ. ಜಾಗತೀಕರಣದ ಬಗ್ಗೆ ಕೆಲಸ ಮಾಡಿರುವ ಕೆಲವು ಅಧ್ಯಯನಕಾರರ ಪ್ರಕಾರ, ಈ ಸಂಸ್ಕೃತಿ ಆಧಾರಿತ ಚಳುವಳಿಗಳೂ ಕೂಡ ಜಾಗತೀಕರಣ ಪ್ರಕ್ರಿಯೆಯ ಭಾಗವೇ. ಅವರ ಅರ್ಥದಲ್ಲಿ ಜಾಗತೀಕರಣಕ್ಕೆ ಪ್ರತಿಯಾಗಿ ಬಂದ ಚಳುವಳಿಗಳೂ ಕೂಡ ಆ ಪ್ರಕ್ರಿಯೆಯ ಭಾಗವೇ ಆಗಿರುತ್ತದೆ. ಈ ಅರ್ಥದಲ್ಲಿ ಜಾಗತೀಕರಣವೆಂದರೆ, ಎಲ್ಲವನ್ನೂ ಬುಲ್‌ಡೋಜ್ ಮಾಡಿ ಏಕ ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವುದೂ ಹೌದು, ಹಲವು ಸಂಸ್ಕೃತಿಗಳಿಗೆ ದಾರಿ ಮಾಡಿಕೊಡುವುದೂ ಹೌದು. ಇವು ಒಂದೇ ಪ್ರಕ್ರಿಯೆಯ ಭಾಗವೇ. ಅವರು ಇವುಗಳನ್ನು ಎರಡು ಬೇರೆ, ಬೇರೆಯಾದ ಪ್ರಕ್ರಿಯೆಗಳಾಗಿ ನೋಡುವುದಿಲ್ಲ, ಬದಲಿಗೆ ಈ ಸಂದರ್ಭದಲ್ಲಿ ಹೇಗೆ ಎರಡೂ ಒಂದರೊಳಗೊಂದು ಬೆರೆಯುತ್ತಿವೆ ಎಂದು ನೋಡುತ್ತಾರೆ. ಅವರ ಪ್ರಕಾರ ಇಂದು ಜಾಗತೀಕರಣ (globalization) ಮತ್ತು ಸ್ಥಳೀಕರಣ (localization) ಎರಡೂ ಒಂದರೊಳಗೊಂದು ಬೆರೆಯುತ್ತಿವೆ. ಇದನ್ನು ಗುರುತಿಸಲು ಅವರು ಮತ್ತೆರೆಡು ಪರಿಕಲ್ಪನೆಗಳನ್ನು ಬಳಸುತ್ತಾರೆ. ಅದು glocalization ಮತ್ತು lobalization. ಅಂದರೆ ಜಾಗತಿಕವಾದುದು, ಸ್ಥಳೀಯವಾದ ಮುಖ ಧರಿಸುತ್ತಿದೆ ಹಾಗೆಯೇ ಸ್ಥಳೀಯವಾದುದು ಜಾಗತಿಕವಾಗುತ್ತಿದೆ. ಇದನ್ನು ಒಂದು ಉದಾಹರಣೆ ನೀಡಿದರೆ ಸ್ಪಷ್ಟವಾಗಬಹುದು. ಕೋಕ್ ಕಂಪನಿಯ ಜಾಹೀರಾತುವಿನಲ್ಲಿ ಅಮೀರ್‌ಖಾನ್ ಹಿಮಾಲಯದ ತಪ್ಪಲಿನಲ್ಲಿ ಷೆರ್ಪಾ ಜನಾಂಗದವನಾಗಿ ಕೋಕ್ ಅನ್ನು ಪ್ರವಾಸಿಗರಿಂದ ಪಡೆದು ಕುಡಿದು ಕುಣಿಯುವ ದೃಶ್ಯ ಇಲ್ಲಿ ನೆನಪಿಸಿಕೊಳ್ಳಬಹುದು. ಸಣ್ಣ ಸಂಸ್ಕೃತಿಯ ಮುಖವಾಡದಲ್ಲೇ ಬಹುರಾಷ್ಟ್ರೀಯ ಕಂಪನಿಯ ವಸ್ತು ಮಾರಾಟವಾಗಲು ಹವಣಿಸುತ್ತಿರುವುದನ್ನು ಈ ಜಾಹೀರಾತು ಪ್ರತಿನಿಧಿಸುತ್ತದೆ. ಹಾಗೆಯೇ ನಮ್ಮ ಜಾನಪದ ಕಲಾತಂಡಗಳಿಗೆ ವಿಶ್ವಮಾರುಕಟ್ಟೆ ಇದೆ. ಆದರೆ ಅದರ ಲಾಭವನ್ನು ಮಧ್ಯವರ್ತಿಗಳು ಲಪಟಾಯಿಸುತ್ತಿದ್ದಾರೆ ಅಷ್ಟೇ.
ಈಗ ನಮ್ಮ ಸಮಕಾಲೀನ ಸಂದರ್ಭದ ಚಳುವಳಿಗಳನ್ನು ಗಮನಿಸಿದರೆ ಮೇಲಿನ ಕೆಲವು ವಿಷಯಗಳು ಸ್ಪಷ್ಟರೂಪ ಪಡೆಯಬಹುದು. ೭೦ ಮತ್ತು ೮೦ರ ದಶಕದಲ್ಲಿ ಕರ್ನಾಟಕದಲ್ಲಿ ನಾವು ಹಲವಾರು ಪ್ರಗತಿಪರ ಎನ್ನುವ ಚಳುವಳಿಗಳನ್ನು ಗಮನಿಸಬಹುದಾಗಿತ್ತು. ದಲಿತ ಚಳುವಳಿ, ರೈತ ಚಳುವಳಿ, ಹಿಂದುಳಿದ ವರ್ಗಗಳು, ಮಹಿಳಾವಾದಗಳು ಪ್ರಬಲಗೊಳ್ಳುತ್ತಿದ್ದ ಕಾಲ ಅದು. ಈ ಎಲ್ಲ ಚಳುವಳಿಗಳನ್ನು ಒಟ್ಟಾಗಿಸಿ ಒಂದು ಪ್ರಗತಿಪರವಾದ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸಬೇಕೆಂಬ ಹಂಬಲಕ್ಕೂ ಇದು ೮೦ರ ದಶಕದ ಮಧ್ಯಭಾಗದ ನಂತರ ದಾರಿಮಾಡಿಕೊಟ್ಟಿತ್ತು. ಆದರೆ ಆ ರೀತಿಯ ಪರ್ಯಾಯ ರೂಪುಗೊಳ್ಳಲೇ ಇಲ್ಲ. ಏಕೆ ಎನ್ನುವುದಕ್ಕೆ ಕಾರಣಗಳನ್ನು ವೈಯಕ್ತಿಕ ನೆಲೆಗಳಲ್ಲಿ, ವ್ಯಕ್ತಿಗತ ನೆಲೆಗಳಲ್ಲಿ ಹುಡುಕಲಾಗಿತ್ತು. ಈಗ ಸೈದ್ಧಾಂತಿಕವಾಗಿ ಅವುಗಳನ್ನು ಪರೀಕ್ಷಿಸಲು ಕಾಲ ಪಕ್ವವಾಗಿದೆ. ೮೦ರ ದಶಕದಲ್ಲಿ ಪ್ರಬಲವಾಗಿದ್ದ ಎಲ್ಲಾ ಚಳುವಳಿಗಳೂ ಇಂದು ಬಹುತೇಕ ಛಿದ್ರ ಮನೆಗಳಾಗಿವೆ.
ಉದಾಹರಣೆಗೆ ದಲಿತ ಚಳುವಳಿಯನ್ನು ಗಮನಿಸಿದರೆ, ಇಂದು ಅದರ ಮುಂದೆ ಇರುವ ಪ್ರಬಲ ಸವಾಲುಗಳಲ್ಲಿ ಮುಖ್ಯವಾದದ್ದು ಆಂತರಿಕ ವೈರುಧ್ಯ. ದಲಿತ ಚಳುವಳಿಯನ್ನು ಬಹುತೇಕ ಮಂದಿ ಜಾತಿ ಆಧಾರಿತ ಚಳುವಳಿಯಾಗಿ ನೋಡುತ್ತಾರೆ. ಇದು ಸರಿಯಲ್ಲ. ಒಂದೇ ಸಮಸ್ಯೆಯನ್ನು ಎದುರಿಸುತ್ತಿರುವ ಹಲವಾರು ಜಾತಿಗಳು ಒಟ್ಟಾಗಿ ರೂಪಿಸಿದ ಚಳುವಳಿ ದಲಿತ ಚಳುವಳಿ. ದಲಿತ ಎನ್ನುವ ಪರಿಕಲ್ಪನೆ, ಮೂಲತ: ಒಂದು ರಾಜಕೀಯ ಪರಿಕಲ್ಪನೆ ಮತ್ತು ಆಧುನಿಕವಾದ ಪರಿಕಲ್ಪನೆ. ದಲಿತ ಎನ್ನುವ ಪರಿಕಲ್ಪನೆ, ಹಲವಾರು ಜಾತಿ/ಸಮುದಾಯಗಳನ್ನು ಸಮಾನ ರಾಜಕೀಯ ಉದ್ದೇಶಕ್ಕಾಗಿ ಒಂದಾಗಿ ಬೆಸೆಯುತ್ತದೆ. ಹೀಗಾಗಿ ಇದು ಜಾತಿಯನ್ನು ಮೀರಿದ ಪರಿಕಲ್ಪನೆ ಮತ್ತು ಜಾತಿಯ ದೌರ್ಜನ್ಯವನ್ನು ವಿರೋಧಿಸಿ ಹುಟ್ಟಿದ ಪರಿಕಲ್ಪನೆ. ಆದರೆ ಇಂಥ ಚಳುವಳಿಯ ಮುಂದೆ ಇರುವ ಬಹುದೊಡ್ಡ ಸವಾಲು ಈ ಪರಿಕಲ್ಪನೆಯನ್ನೇ ಅಡ್ಡಡ್ಡ ಸೀಳುವಷ್ಟು ಸಮರ್ಥವಾದದ್ದು. ನಾನಿಲ್ಲಿ ಎಸ್.ಸಿ./ಎಸ್.ಟಿಯಲ್ಲಿ ಒಳ ಮೀಸಲಾಗಿ ಕೋರುತ್ತಿರುವ ಚಳುವಳಿಗಳ ಹಿನ್ನಲೆಯಲ್ಲಿ ಮಾತನಾಡುತ್ತಿದ್ದೇನೆ. ದಲಿತ ಚಳುವಳಿ ತಾನು ವಿರೋಧಿಸುತ್ತಿರುವ ಯಾಜಮಾನ್ಯದ ವಿರುದ್ಧ ಹಲವಾರು ಶೋಷಿತ ಎನ್ನುವ ಜಾತಿಗಳನ್ನು ಒಟ್ಟಾಗಿಸುತ್ತಿದ್ದರೆ, ಅದರಲ್ಲೇ ಮತ್ತೊಂದು ರೀತಿಯ ಜಾತಿ ಧೃವೀಕರಣ ಆರಂಭವಾಗಿದೆ. ನಾನಿಲ್ಲಿ ಈ ಬೆಳವಣಿಗೆ ಸರಿ ಎಂದಾಗಲಿ ತಪ್ಪು ಎಂದಾಗಲಿ ಹೇಳುತ್ತಿಲ್ಲ. ಸಣ್ಣ, ಸಣ್ಣ ಸಾಂಸ್ಕೃತಿಕ ಎಂದು ಕರೆಯಲಾಗುವ ಗುರುತುಗಳು ಹೇಗೆ ಪ್ರಬಲವಾಗುತ್ತಿವೆ ಇಂದಿನ ಸಂದರ್ಭದಲ್ಲಿ ಎಂದಷ್ಟೇ ವಿವರಿಸುತ್ತಿದ್ದೇನೆ. ಏಕೆಂದರೆ ಈ ರೀತಿಯ ಸಣ್ಣ ಗುರುತುಗಳ ಪ್ರವರ್ಧಮಾನವನ್ನು ಎರಡೂ ನೆಲೆಯಲ್ಲಿ ನೋಡಲಾಗುತ್ತಿದೆ. ದಲಿತ ಪರಿಕಲ್ಪನೆಯಡಿ ಬರುವ ವಿವಿಧ ಜಾತಿಗಳಲ್ಲೇ ಅಸಮಾನತೆ ಇದೆ, ಅದನ್ನು ಹೋಗಲಾಡಿಸದೆ ಮುಂದೆ ಹೆಜ್ಜೆ ಇಡುವುದು ಒಳಗಿನ ಪ್ರಬಲ ಜಾತಿಗೆ ಅನುಕೂಲಕರವಾಗಿ ಒಳಗಿನ ಅಸಮಾನತೆಯನ್ನು ಹೆಚ್ಚು ಮಾಡುತ್ತದೆ ಎನ್ನುವ ವಾದ ಒಂದಾದರೆ, ಮತ್ತೊಂದು ಇದು ದಲಿತ ಚಳುವಳಿಯನ್ನು ಒಡೆಯಲು ಮೇಲ್ಜಾತಿಗಳು ನಡೆಸಿರುವ ಹುನ್ನಾರ ಎಂದು ವಾದಿಸುತ್ತದೆ ಹಾಗು ಇದರಿಂದ ಅಂತಿಮವಾಗಿ ಯಾವುದೇ ರೀತಿಯ ಲಾಭ ದಲಿತರಿಗೆ ದಕ್ಕುವುದಿಲ್ಲ ಎನ್ನುತ್ತದೆ. ಈ ಎರಡೂ ವಾದಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಥವಾ ಅವುಗಳ ನಡುವೆ ಪಂಚಾಯಿತಿ ಮಾಡುವುದು ಈ ಲೇಖನದ ಉದ್ಧೇಶವಲ್ಲ. ನಮಗಿಲ್ಲಿ ಮುಖ್ಯವಾಗಬೇಕಾದದ್ದು ಈ ರೀತಿಯ ಸಾಂಸ್ಕೃತಿಕ ಎನ್ನುವ ಗುರುತುಗಳ ಹೆಚ್ಚಳದ ಪ್ರಕ್ರಿಯೆಯ ಪರಿಣಾಮ ಏನು ಎನ್ನುವುದು ಹಾಗು ಎಷ್ಟರ ಮಟ್ಟಿಗೆ ಇದು ಸಮಕಾಲೀನ ಸಂದರ್ಭದ ಸವಾಲುಗಳನ್ನು ಎದುರಿಸುತ್ತಿವೆ ಎನ್ನುವುದು.
ಒಳಮೀಸಲಾತಿಯ ಅಗತ್ಯದ ಬಗ್ಗೆ ಪ್ರಸ್ತಾಪ ಮಾಡುತ್ತಿರುವವರು ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಗಮನದಲ್ಲಿ ಇಟ್ಟು ಮಾತನಾಡುತ್ತಿದ್ದಾರೆ. ಆದರೆ ಇಂದಿನ ಸಂದರ್ಭದಲ್ಲಿ, ರಾಷ್ಟ್ರಪ್ರಭುತ್ವ ಸರಕಾರಿ ಉದ್ಯೋಗಗಳನ್ನೇ ಮಾಯವಾಗಿಸುತ್ತಿದೆ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಯವರ ಕೈಯಲ್ಲಿಡುವ ಮಾತನಾಡುತ್ತಿದೆ. ಹಾಗಾದರೆ ಸರಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ಒಳಮೀಸಲಾತಿ ಕೇಳುವ ಉದ್ದೇಶ ಎಷ್ಟರ ಮಟ್ಟಿಗೆ ಸರಿ? ಉದ್ಯೋಗಗಳು ಖಾಸಗಿ ರಂಗದಲ್ಲಿ ಸೃಷ್ಟಿಯಾಗುತ್ತಿದ್ದರೆ ಅವುಗಳನ್ನು ಪಡೆಯುವುದು ಹೇಗೆ ಎನ್ನುವ ಪ್ರಶ್ನೆಯನ್ನೇ ಈಗಿನ ಪರಿಸ್ಥಿತಿ ನಗಣ್ಯವಾಗಿಸುತ್ತದೆ. ದಲಿತರು ಕಮ್ಮಿ ಪ್ರಮಾಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಕೆಲಸದ ಸಮಸ್ಯೆ ಇರಲಿಲ್ಲ. ದಲಿತರು ಹೆಚ್ಚೆಚ್ಚು ಪ್ರಮಾಣದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಸರಕಾರಿ ಉದ್ಯೋಗಗಳಿಗೆ ಆಶಿಸುತ್ತಿದ್ದಾರೆ. ಆದರೆ ನೌಕರಿಯೇ ಇಲ್ಲ. ಉದ್ಯೋಗವಕಾಶಗಳು ಕಮ್ಮಿಯಾಗಿವೆ. ರಾಷ್ಟ್ರಪ್ರಭುತ್ವ ತನ್ನ ಹೊಣೆಗಾರಿಕೆಯಾದ ಆಡಳಿತ ಮತ್ತು ಸಮಾಜಕಲ್ಯಾಣ ತತ್ವಗಳಿಗೆ ಜಾಗತೀಕರಣದ ಸಂದರ್ಭದಲ್ಲಿ ತಿಲಾಂಜಲಿ ಇತ್ತಿರುವುದರಿಂದ ಈ ಸಮಸ್ಯ ಉಂಟಾಗಿದೆ ಎಂದು ನೋಡದೆ, ತಮ್ಮ ತಮ್ಮಲ್ಲೇ ಕಿತ್ತಾಡಲಿಕ್ಕೆ ಈ ಸಾಂಸ್ಕೃತಿಕ ಗುರುತುಗಳು ಕಾರಣವಾಗುತ್ತಿವೆ. ೪ ಉದ್ಯೋಗಗಳು ಇದ್ದು ೩ಜನ ವಿದ್ಯಾವಂತರು ಇದ್ದಾಗ ೩ ಜನ ಯಾವ ದಲಿತ ಜಾತಿಗೆ ಸೇರಿದವರು ಎಂಬ ಪ್ರಶ್ನೆ ಆರಂಭವಾಗಲಿಲ್ಲ. ಈ ಸಮಸ್ಯೆ ಆರಂಭವಾದದ್ದು ೪ ಉದ್ಯೋಗಗಳು ೩ ಆದಾಗ ಮತ್ತು ವಿದ್ಯಾವಂತ ದಲಿತರ ಸಂಖ್ಯೆ ೪ ರಿಂದ ೬ ಆದಾಗ ಎಂಬುದು ಮುಖ್ಯ. ನಾನಿಲ್ಲಿ ತಾತ್ವಿಕವಾಗಿ ಒಳಮೀಸಲಾತಿಯನ್ನು ವಿರೋಧಿಸುತ್ತಿಲ್ಲ ಅಥವಾ ಅದು ಮುಖ್ಯ ಸಮಸ್ಯೆ ಎಂದೂ ಹೇಳುತ್ತಿಲ್ಲ. ಅದಕ್ಕಿಂತ ಜರೂರಾದದ್ದು ಬೇರೆ ಇz. ಆದರೆ ರಾಜಕೀಯ ಪರಿಕಲ್ಪನೆಯ ಬದಲು, ಸಾಂಸ್ಕೃತಿಕ ಗುರುತು ಎನ್ನುವ ಹೆಸರಲ್ಲಿ ಜನರನ್ನು ಸಂಘಟಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೇನೆ.
ಇನ್ನಷ್ಟು ಉದಾಹರಣೆಗಳು ನೀಡಿದರೆ ಇದು ಸ್ಪಷ್ಟಗೊಳ್ಳಬಹುದು. ಹಿಂದೆ ಸಾರ್ವಜನಿಕ ಉದ್ದಿಮೆಗಳಲ್ಲಿ ವರ್ಗಆಧಾರಿತ ಸಂಘಟನೆಗಳಷ್ಟೇ ಇದ್ದವು. ನಂತರ ಹಲವಾರು ಜಾತಿಗಳು ಸೇರಿದ ದಲಿತ ಸಂಘಟನೆಗಳು ಅಂಬೇಡ್ಕರ್ ಹೆಸರಲ್ಲೋ, ಎಸ್.ಸಿ. ಎಸ್.ಟಿ ಹೆಸರಲ್ಲೋ ಆರಂಭವಾದವು ಅವೆರಡು ಕೂಡ ನಾವು ಪ್ರಗತಿಪರ ಎಂದು ಗುರುತಿಸುವ ಪರಿಧಿಯಲ್ಲೇ ಇದ್ದವು. ಆದರೆ ಈಗ ಕನಕ ಸಂಘ, ಬಸವೇಶ್ವರ ಸಂಘ, ವಾಲ್ಮೀಕಿ ಸಂಘ, ಕನ್ನಡ ಸಂಘ, ತಮಿಳು ಸಂಘ ಇತ್ಯಾದಿ ಸಾಂಸ್ಕೃತಿಕ ಗುರುತುಗಳನ್ನು ಆಧರಿಸಿದ ಸಂಘಟನೆಗಳು ಆರಂಭವಾಗಿ ಸಾರ್ವಜನಿಕ ಉದ್ದಿಮೆಗಳು ನೌಕರರನ್ನು ಸಂಘಟಿಸುತ್ತಿವೆ. ಇದು ಅಂತಿಮವಾಗಿ ಯಾರಿಗೆ ಲಾಭ? ಯೋಚಿಸಬೇಕಾಗಿದೆ.
ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸಲು ಕೆಲವರು ಸಾಂಸ್ಕೃತಿಕ ಎಂದು ಗುರುತಿಸಲಾಗುವ ಗುರುತುಗಳನ್ನು ಆಧರಿಸಿ ಪ್ರತಿರೋಧ ರೂಪಿಸಬೇಕು ಎಂದು ವಾದಿಸುತ್ತಾರೆ. ಇವರ ಅರ್ಥದಲ್ಲಿ ‘ಸಾಂಸ್ಕೃತಿಕ ಎನ್ನುವುದ ಧರ್ಮ, ಜಾತಿ, ಪಂಗಡಳಿಗೆ ಸಂಬಂಧಿಸಿದ್ದು. ಇವರ ಕಾರ್ಯವೈಖರಿ ಹೇಗಿದೆ ಎಂದರೆ, ಒಂದು ಬಹುರಾಷ್ಟ್ರೀಯ ಕಂಪನಿ ಗಣಿಗಾರಿಕೆಯನ್ನು ಆರಂಭಿಸುತ್ತಿದೆ ಎಂದರೆ, ಇವರು ಅದಕ್ಕೆ ವಿರುದ್ಧವಾಗಿ ಅದು ಅಲ್ಲಿರುವ ಒಂದು ಪುರಾತನ ದೇವಸ್ಥಾನವನ್ನು ಹೇಗೆ ನಾಶ ಮಾಡುತ್ತದೆ ಎಂದು ವಿರೋಧಿಸುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಪ್ರತಿರೋಧವನ್ನು ರೂಪಿಸಬಹುದು? ಆ ಕಂಪನಿ ದೇವಸ್ಥಾನದ ಪುನರುದ್ಧಾರಕ್ಕೆ, ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲಿದರೆ ಅದನ್ನು ಆಧರಿಸಿದ ಪ್ರತಿರೋಧದ ಕಥೆ ಏನು? ಹಾಗೆಯೇ ಕನ್ನಡ ಭಾಷೆ ನಾಶವಾಗುತ್ತದೆ ಎಂದು ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಗಳನ್ನು ವಿರೋಧಿಸಿದರೆ, ಅವರು ಕನ್ನಡ ಭಾಷೆಯಲ್ಲೂ ಕೆಲವು ಸಾಫ್ಟ್‌ವೇರ್‌ಗಳನ್ನು ರೂಪಿಸಬಹುದು ಮತ್ತು ಪ್ರತಿ ವರ್ಷ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕೆಲವನ್ನು ಗುರುತಿಸಿ ಕೆಲವು ಲಕ್ಷಗಳ ಪ್ರಶಸ್ತಿಗಳನ್ನು ನೀಡಲು ಆರಂಬಿಸಿದರೆ ಆಗ ಕನ್ನಡವನ್ನು ಆಧರಿಸಿದ ಪ್ರತಿರೋಧದ ಕಥೆ ಏನು? ನಾನಿಲ್ಲಿ ಕೆಲವು ಊಹಾತ್ಮಕ ಉದಾಹರಣೆಗಳನ್ನು ನೀಡುತ್ತಿದ್ದೇನೆ ಅಷ್ಟೇ. ’ಸಾಂಸ್ಕೃತಿಕ’ಎನ್ನುವ ಗುರುತುಗಳನ್ನು ಆಧರಿಸಿದ ಪ್ರತಿರೋಧಗಳು ಜಾಗತೀಕರಣದ ಭಾಗವೇ ಮತ್ತು ಪೂರಕವಾದದ್ದೇ ಎಂಬ ಗುಮಾನಿಯನ್ನು ಮೂಡಿಸುವುದು ನನ್ನ ಉದ್ದೇಶ. ಏಕೆ ಸ್ಥಳೀಕರಣ ಕೂಡ ಜಾಗತೀಕರಣದ ಭಾಗವೇ ಎಂದರೆ, ಸ್ಥಳೀಯವಾದದ್ದನ್ನು ಸುಲಭವಾಗಿ ಜಾಗತಿಕವು ತನ್ನದಾಗಿಸಿಕೊಳ್ಳಬಹುದು, ಪ್ರಬಲವಾದ ಜಾಗತಿಕ ಪ್ರತಿರೋಧವಿದ್ದರೆ ಅದನ್ನು ಸುಲಭವಾಗಿ ತನ್ನದಾಗಿಸಿಕೊಳ್ಳಲು ಜಾಗತೀಕರಣಕ್ಕೆ ಸಾಧ್ಯವಾಗುವುದಿಲ್ಲ.
ಈ ಸ್ಥಳೀಕರಣ, ಸಾಂಸ್ಕೃತಿಕ ಗುರುತುಗಳ ಹೆಚ್ಚಳ ಇವುಗಳೆಲ್ಲವೂ ಆಧುನಿಕೋತ್ತರ ವಿಚಾರಧಾರೆಯ ಭಾಗವಾದ ಛಿದ್ರೀಕರಣ, ಮೆಟಾನೆರೇಟಿವ್‌ಗಳ (meta-narrative, ವಿರಾಟ್‌ಕಥಾನಕಗಳು, ಉದಾ: ಮಾರ್ಕ್ಸ್‌ವಾದ) ಬಗೆಗಿನ ಸಂದೇಹ ಇವುಗಳ ಭಾಗವಾಗೇ ಮೂಡುತ್ತಿರುವವು ಎಂಬುದು ನನ್ನ ವಾದ. ಇಂದು ನಮ್ಮ ಅನೇಕ ತಲ್ಲಣಗಳಿಗೆ ಕಾರಣವಾಗಿರುವುದು ಈ ಆಧುನಿಕೋತ್ತರ ವಿಚಾರಧಾರೆಯೇ. ಪ್ರಬಲ ಯಾಜಮಾನ್ಯಗಳಿಗೆ ಪ್ರಬಲ ಪ್ರತಿರೋಧ ನೀಡಲು ವಿರಾಟ್ ಕಥನಗಳಿಗೆ ಮಾತ್ರ ಸಾಧ್ಯ. ಸ್ಥಳೀಕೃತ ಪ್ರತಿರೋಧಗಳನ್ನು ಸುಲಭವಾಗಿ ಪ್ರಬಲ ಯಾಜಮಾನ್ಯಗಳು ತಣಿಸಿಬಿಡುತ್ತವೆ, ತುಳಿಯುವುದರ ಮೂಲಕ ಅಥವಾ ಅದನ್ನು ತೃಪ್ತಿಗೊಳಿಸಿ, ಶಮನಗೊಳಿಸುವ ಮೂಲಕ. ನಾನಿಲ್ಲಿ ವಿರಾಟ್ ಕಥಾನಕಗಳನ್ನು (ಅಂದರೆ ಮಾರ್ಕ್ಸ್‌ವಾದವನ್ನು ಅಥವಾ ಅದೇ ಮಾದರಿಯ ಇಡೀ ವಿಶ್ವವನ್ನು ವೈಚಾರಿಕತೆಯ ಮೂಲಕ ಅರಿಯಲು ಸಾಧ್ಯ) ಸಮರ್ಥಿಸುತ್ತಿದ್ದೇನೆ ಎಂದಲ್ಲ. ಅಥವಾ ಸ್ಥಳೀಯತೆಯನ್ನು ಆಧರಿಸಿದ ಗುರುತುಗಳು ಎತ್ತುತ್ತಿರುವ ರಾಜಕೀಯ ಪ್ರಶ್ನೆಯನ್ನಾಗಲಿ ಅಥವಾ ಶೋಷಣೆಯ ಪ್ರಶ್ನೆಯನ್ನಾಗಲಿ ಗೌಣವಾಗಿಸುತ್ತಿದ್ದೇನೆ ಎಂದೂ ಅಲ್ಲ. ಈ ಸ್ಥಳೀಯತೆಯನ್ನು ಆಧರಿಸಿದ ಗುರುತು ರಾಜಕಾರಣ ಮುಂದುಮಾಡುವ ಪ್ರಶ್ನೆಗಳನ್ನು ಮತ್ತು ಪ್ರಬಲ ಯಾಜಮಾನ್ಯವನ್ನು ವಿರೋಧಿಸಬಹುದಾದ ವಾದಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುತ್ತಿರುವೆ. ಅವೆರಡನ್ನು ಬೇರೆ ಬೇರೆಯಾಗಿ ನೋಡದೆ ವಿರುದ್ಧವಾದದ್ದಾಗಿ ನೋಡದೆ ಇರಲು ಸಾಧ್ಯವೇ? ಮಾರ್ಕ್ಸ್‌ವಾದ ಬಂಡವಾಳದ ಜೊತೆಗೆ ಸ್ಥಳೀಯ ಮತ್ತು ಸಾಂಸ್ಕೃತಿಕ ಎನ್ನುವ ಪ್ರಶ್ನೆಗಳನ್ನು ಜೊತೆಯಾಗಿ ನೋಡುವಂತೆ ಮಾಡಲಾಗದೆ? ಹಾಗೆಯೇ ಸ್ಥಳೀಯ ಚಳುವಳಿಗಳು ಎಂದು ಕರೆದುಕೊಳ್ಳುವ ಚಳುವಳಿಗಳು ಗುರುತು ಪ್ರಶ್ನೆಯನ್ನು ಮಾತ್ರ ಮುಂದು ಮಾಡದೆ, ಅದರೊಂದಿಗೆ ಇತರ ಶೋಷಿತರ ಪ್ರಶ್ನೆಗಳನ್ನು ತಮ್ಮ ಚಳುವಳಿಯ ಭಾಗವಾಗಿ ಇಂಟಿಗ್ರೇಟ್ ಮಾಡಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆಗಳಿವು.
ಇವುಗಳಿಗೆ ಉತ್ತರ ಸದ್ಯದ ಸಿದ್ಧಾಂತಗಳಲ್ಲಿ ಇಲ್ಲ. ಹಿಂದೆ ತಿಳಿಸಿದಂತೆ ಫೂಕೋನ ವಿಚಾರಗಳಾಗಲಿ ಅಥವಾ ಡೆರಿಡಾನ ವಿಚಾರಗಳಾಗಲಿ ಶೋಷಣೆಯ ವ್ಯವಸ್ಥೆಯನ್ನು ವಿಶ್ಲೇಷಿಸಲು ಬಳಸಬಹುದೇ ಹೊರತು ಅದಕ್ಕೆ ಪರ್ಯಾಯವಾಗಿ ಅವುಗಳು ಏನನ್ನೂ ಮುಂದಿಡುವುದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿಲ್ಲ ಎಂದೇನಲ್ಲ. ಮಾರ್ಕ್ಸ್‌ವಾದವು ತನ್ನ ಹಿಂದಿನ ನಿಲುವುಗಳನ್ನು ಮರುಪರಿಶೀಲನೆಗೆ ಒಳಪಡಿಸುತ್ತಿದೆ. ಇದರಿಂದಾಗಿಯೇ ಮಾರ್ಕ್ಸ್‌ವಾದದಲ್ಲೇ ಮಾರ್ಕ್ಸಿಸ್ಟ್ ಫೆಮಿನಿಸ್ಟ್, ಸಂರಚನೋತ್ತರವಾದಿ ಮಾರ್ಕ್ಸ್‌ವಾದ, ವಸಾಹತೋತ್ತರವಾದಿ ಮಾರ್ಕ್ಸ್‌ವಾದ ಎಂಬ ಹೊಸ ವಾದಗಳು ಉಗಮವಾಗಿರುವವು. ಎಲ್ಲ ಛಿದ್ರ ಸ್ಥಳೀಯಗುರುತುಗಳನ್ನು ಆಧರಿಸಿದ ಚಳುವಳಿಗಳನ್ನು ಒಂದು ವಿಶಾಲವಾದ ಪರಿಕಲ್ಪನೆಯಡಿ ತರುವ ಪ್ರಯತ್ನಗಳೂ ನಡೆಯುತ್ತಿವೆ. ದಲಿತರು, ಮಹಿಳೆಯರು ಮತ್ತು ಇತರ ಶೋಷಿತರು ಒಂದಾಗಬೇಕು ಎಂಬ ಘೋಷಣೆಗಳೇನೂ ಹೊಸದಲ್ಲ. ಆದರೆ ಅದಕ್ಕಿರುವ ಅಡ್ಡಿ ಆತಂಕಗಳನ್ನು ಕುರಿತು ಸೈದ್ಧಾಂತಿಕವಾಗಿಯಾಗಲಿ (theoretically) ಅಥವಾ ತಾತ್ವಿಕವಾಗಿಯಾಗಲಿ (ideologically) ನಾವು ಚರ್ಚೆಯನ್ನು ಮಾಡಿಲ್ಲ. ಮಾಡುವ ಮೊದಲೆ ದಲಿತ ಅಥವಾ ಮಹಿಳೆ ಎನ್ನುವ ಪರಿಕಲ್ಪನೆಗಳೇ ಛಿದ್ರೀಕರಣಕ್ಕೆ ಒಳಗಾಗುತ್ತಿವೆ. ದಲಿತರಲ್ಲಿನ ಆಂತರಿಕ ವೈರುಧ್ಯ ಅಥವಾ ಮಹಿಳೆಯರಲ್ಲಿನ ಆಂತರಿಕ ವ್ಶೆರುಧ್ಯಗಳನ್ನು ಪರಿಗಣನೆಗೆ ತೆಗೆದುಕೊಂಡು ನಂತರ ದಲಿತರು ಮತ್ತು ಮಹಿಳೆಯರ ನಡುವಿನ ವ್ಶೆರುಧ್ಯಗಳೇನು, ಅವುಗಳನ್ನು ಬಗೆಹರಿಸುವುದು ಹೇಗೆ, ಅವುಗಳನ್ನು ಬಗೆಹರಿಸಿ ಅಥವಾ ಬಗೆಹರಿಸುವುದರೊಂದಿಗೆ ಸಮಾನ ಶತೃಗಳ ಜೊತೆ ಹೋರಾಡಲು ಪರಸ್ಪರ ಕೈಜೋಡಿಸುವುದು ಹೇಗೆ ಎಂಬ ಪ್ರಶ್ನೆಗಳನ್ನು ನಾವು ಇಂದು ಎದುರಿಸಬೇಕಾಗಿದೆ. ಎದುರಿಸಿದಾಗ ಸಿದ್ಧಾಂತಗಳು ತಲ್ಲಣಗಳನ್ನು ಉಂಟುಮಾಡುವುದಿಲ್ಲ, ಬದಲಿಗೆ ದಾರಿದೀಪಗಳಾಗಬಹುದು.

No comments:

Post a Comment

My Blog List